ನಾಟಿಂಗ್ಹ್ಯಾಮ್ (Nottingham): ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿದೆ. ಆದರೆ ಸರಣಿಯ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಸರಣಿ ಕೈವಶ ಮಾಡಿಕೊಂಡಿದೆ.
ಇನ್ನು ಇಂಗ್ಲೆಂಡ್ ತಂಡ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ವೈಟ್ ವಾಶ್ ಮುಖಭಂಗದಿಂದ ಪಾರಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ ಭಾರತಕ್ಕೆ 216 ರನ್ ಗಳ ಬೃಹತ್ ರನ್ ಗಳ ಗುರಿ ನೀಡಿತ್ತು.
ಇಂಗ್ಲೆಂಡ್ ನ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭಿಕ ಆಘಾತಕ್ಕೊಳಗಾಯಿತು. ರೋಹಿತ್ ಶರ್ಮಾ (11), ರಿಷಭ್ ಪಂತ್ (5), ವಿರಾಟ್ ಕೊಹ್ಲಿ (11) ರನ್ ಗಳಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.
ಆದರೆ ಸೂರ್ಯಕುಮಾರ್ ಯಾದವ್ (55 ಎಸೆತಗಳಲ್ಲಿ 117 ರನ್) ಗಳಿಸಿ ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಆದರೆ ನಂತರ ಬಂದ ಬ್ಯಾಟ್ಸ್ಮನ್ ಗಳ ವೈಫಲ್ಯದ ಪರಿಣಾಮವಾಗಿ ಸೂರ್ಯಕುಮಾರ್ ಯಾದವ್ ಅವರದ್ದು ಏಕಾಂಗಿ ಹೋರಾಟವಾಯಿತು. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಇಂಗ್ಲೆಂಡ್ ಬೌಲರ್ ಗಳು ಅಂತಿಮವಾಗಿ 20 ಓವರ್ ಗಳಲ್ಲಿ ಭಾರತ ತಂಡವನ್ನು 9 ವಿಕೆಟ್ ಗಳ ನಷ್ಟಕ್ಕೆ 198 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಆದರೆ ಈಗಾಗಲೇ ಸರಣಿಯ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ಭಾರತ ಸರಣಿ ಪಡೆದುಕೊಂಡಿದೆ. ಸರಣಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭುವನೇಶ್ವರ್ ಕುಮಾರ್ ಭಾಜನರಾದರೆ, ರೀಸ್ ಟೋಪ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.