ಮೈಸೂರು: ಮೈಸೂರು ನಗರ ಪೊಲೀಸರು ಕಳೆದ 8 ತಿಂಗಳಲ್ಲಿ ಪತ್ತೆಹಚ್ಚಿದ 149 ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 4.23 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿಸಿದ್ದಾರೆ. ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಡೆದ ಪ್ರಾಪರ್ಟಿ ರಿಟರ್ನ್ ಪೆರೇಡ್‌ನಲ್ಲಿ ಮಾಲು ಹಸ್ತಾಂತರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಈ ಕಾರ್ಯಕ್ರಮವನ್ನು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವ ವಹಿಸಿದ್ದರು. ಪ್ರಕರಣಗಳಲ್ಲಿ ವಶಕ್ಕೆ ಪಡೆದ ಚಿನ್ನಾಭರಣ, ನಗದು, ವಾಹನಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕಳೆದುಕೊಂಡವರಿಗೆ ಹಸ್ತಾಂತರಿಸಲಾಯಿತು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರಿಗೆ ಪ್ರಶಂಸಾ ಪತ್ರ ವಿತರಿಸುವ ಮೂಲಕ ಲಾಟ್ಕರ್ ಅವರ ಶ್ಲಾಘನೆ ವ್ಯಕ್ತಪಡಿಸಿದರು. ಈ ವೇಳೆ ಡಿಸಿಪಿ ಎಂ. ಮುತ್ತುರಾಜ್, ಸುಂದರ್ ರಾಜ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪರಾಧ ಪತ್ತೆ ಹಾಗೂ ವಸ್ತು ಮೌಲ್ಯ:
ಪೊಲೀಸರು ಪತ್ತೆ ಹಚ್ಚಿದ 149 ಪ್ರಕರಣಗಳಲ್ಲಿ 4 ಸುಲಿಗೆ, 2 ದರೋಡೆ, 21 ಸರಗಳ್ಳತನ, 34 ಸಾಮಾನ್ಯ ಕಳ್ಳತನ, 6 ಮನೆ ಕಳ್ಳತನ, ಹಾಗೂ 69 ವಾಹನ ಕಳವು ಪ್ರಕರಣಗಳು ಸೇರಿವೆ. ಈ ಪ್ರಕರಣಗಳಿಂದಾಗಿ 5 ಕೆಜಿ 320 ಗ್ರಾಂ ಚಿನ್ನಾಭರಣ, 6 ಕೆಜಿ 246 ಗ್ರಾಂ ಬೆಳ್ಳಿ ವಸ್ತುಗಳು, 52 ದ್ವಿಚಕ್ರ ವಾಹನಗಳು, 9 ಕಾರುಗಳು, 8 ಗೂಡ್ಸ್ ವಾಹನಗಳು ಹಾಗೂ ₹13.54 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ವಸ್ತುಗಳ ಒಟ್ಟು ಮೌಲ್ಯ ₹4.23 ಕೋಟಿ. 20 ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಅಂತರರಾಜ್ಯ ಆರೋಪಿಗಳಾಗಿದ್ದಾರೆ ಎಂದು ಆಯುಕ್ತೆ ಮಾಹಿತಿ ನೀಡಿದರು.
ಪ್ರಮುಖ ಪ್ರಕರಣಗಳ ವಿವರ:
- ಸಿಸಿಬಿ ಘಟಕ: 4 ಆರೋಪಿಗಳನ್ನು ಬಂಧಿಸಿ, ₹62.17 ಲಕ್ಷ ಮೌಲ್ಯದ 802.576 ಗ್ರಾಂ ಚಿನ್ನಾಭರಣ, 1,520 ಗ್ರಾಂ ಬೆಳ್ಳಿ, 5 ವಾಹನಗಳು, 1 ಪಿಸ್ತೂಲ್ ಮತ್ತು 2 ಗುಂಡುಗಳನ್ನು ವಶಪಡಿಸಿತು.
- ಸರಸ್ವತಿಪುರಂ ಠಾಣೆ: 1 ಆರೋಪಿಯಿಂದ ₹38.82 ಲಕ್ಷ ಮೌಲ್ಯದ 539.17 ಗ್ರಾಂ ಚಿನ್ನಾಭರಣ ವಶಪಡಿಸಿತು.
- ಆಲನಹಳ್ಳಿ ಠಾಣೆ: 4 ಆರೋಪಿಗಳು ಹಾಗೂ ಒಬ್ಬ ಬಾಲಕನಿಂದ ₹15 ಲಕ್ಷ ಮೌಲ್ಯದ 190 ಗ್ರಾಂ ಚಿನ್ನಾಭರಣ ವಶಪಡಿಸಿತು.
- ನಜರ್‌ಬಾದ್ ಠಾಣೆ: 1 ಆರೋಪಿಯಿಂದ ₹7 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿತು.
ಎನ್‌ಡಿಪಿಎಸ್ ಪ್ರಕರಣಗಳು:
ನಗರದಲ್ಲಿ ಅಡಿಯಲ್ಲಿ 25 ಪ್ರಕರಣಗಳು ದಾಖಲಾಗಿದ್ದು, 52 ಆರೋಪಿಗಳನ್ನು ಬಂಧಿಸಲಾಗಿದೆ. ₹57.47 ಲಕ್ಷ ಮೌಲ್ಯದ 224 ಕೆಜಿ 375 ಗ್ರಾಂ ಗಾಂಜಾ ಹಾಗೂ 96.16 ಗ್ರಾಂ ಸಿಂಥೆಟಿಕ್ ಡ್ರಗ್ ವಶಕ್ಕೆ ಪಡೆಯಲಾಗಿದೆ.
ಆನ್‌ಲೈನ್ ವಂಚನೆ ಪ್ರಕರಣಗಳು:
ಆನ್‌ಲೈನ್ ಇನ್ವೆಸ್ಟ್‌ಮೆಂಟ್ ಫ್ರಾಡ್, ಶೇರ್‌ಮಾರ್ಕೆಟ್ ವಂಚನೆ, ಉದ್ಯೋಗ ಭರವಸೆ, ಡಿಜಿಟಲ್ ಅರೆ, ಟಿಪ್ಲೈನ್ ಸೇರಿದಂತೆ ಒಟ್ಟು 8 ಪ್ರಕರಣಗಳಲ್ಲಿ 13 ಆರೋಪಿಗಳನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯ ಮೂಲಕ ಮೈಸೂರು ನಗರ ಪೊಲೀಸ್ ಇಲಾಖೆ ಮತ್ತೆ ತಮ್ಮ ಶಿಸ್ತು, ಪರಿಶ್ರಮ ಹಾಗೂ ಸಾರ್ವಜನಿಕರ ಭದ್ರತೆಯ ಕುರಿತು ತಮ್ಮ ಬದ್ಧತೆಯನ್ನು ತೋರಿಸಿವೆ. ಸಾರ್ವಜನಿಕರು ಪೊಲೀಸರು ಮಾಡಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.














