ಚಾಮರಾಜನಗರ(Chamarajangara): ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಸಾಕಾನೆ ಶಿಬಿರದಿಂದ 4 ಸಾಕಾನೆಗಳನ್ನು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಆದೇಶದ ಮೇರೆಗೆ ಮಧ್ಯಪ್ರದೇಶಕ್ಕೆ ಹಸ್ತಾಂತರಿಸಲಾಗಿದೆ.
ರಾಂಪುರ ಸಾಕಾನೆ ಶಿಬಿರದ ಕೃಷ್ಣ, ಗಜ, ಮರ್ಷಿಹ ಮತ್ತು ಪೂಜಾ ಎಂಬ 4 ಆನೆಗಳನ್ನು ರವಾನಿಸಲಾಗಿದೆ. ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ 5 ಸಾಕಾನೆಗಳನ್ನು ಕಳುಹಿಸಲು ಚಿಂತಿಸಲಾಗಿತ್ತು. ಆದರೆ, ಗಣೇಶ ಆನೆ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆ ಇದೀಗ ಎರಡು ಗಂಡು ಹಾಗೂ ಎರಡು ಹೆಣ್ಣು ಸೇರಿ ಒಟ್ಟು 4 ಆನೆಗಳನ್ನು ಕಳುಹಿಸಲಾಗಿದೆ. ಕಳೆದ ತಿಂಗಳು ನಿಸರ್ಗ ಎಂಬ ಸಾಕಾನೆಯನ್ನು ಸಹ ರವಾನಿಸಲಾಗಿತ್ತು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಸಾಕಾನೆ ಶಿಬಿರದಿಂದ ಹೊರಟ 4 ಆನೆಗಳನ್ನು ಪಶು ವೈದ್ಯಾಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು, ನಾಲ್ಕು ಕೂಡ ಆರೋಗ್ಯವಾಗಿವೆ ಎಂದು ದೃಢಪಡಿಸಿದ್ದಾರೆ.
ಮಧ್ಯಪ್ರದೇಶದ ಭೂಪಾಲ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ಕೋಬ್ರಾಗಡೆ ಅವರಿಗೆ ಅಧಿಕೃತವಾಗಿ ಆನೆಗಳನ್ನು ಹಸ್ತಾಂತರಿಸಲಾಯಿತು.