ಮುಂದಿನ ವಾರದಿಂದ ಸುಪ್ರೀಂ ಕೋರ್ಟ’ನಲ್ಲಿ ನಾಲ್ಕು ವಿಶೇಷ ಪೀಠಗಳು ರಚನೆಯಾಗಲಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಬುಧವಾರ ಹೇಳಿದ್ದಾರೆ.
ನಾಲ್ಕು ಪೀಠಗಳು ಕೈಗೆತ್ತಿಕೊಳ್ಳಲಿರುವ ಪ್ರಕರಣಗಳ ವಿವರ ಇಂತಿದೆ:
1. ಕ್ರಿಮಿನಲ್ ಮೇಲ್ಮನವಿಗಳು
2. ಭೂಸ್ವಾಧೀನ ಪ್ರಕರಣಗಳು
3. ಮೋಟಾರ್ ಅಪಘಾತ ಪರಿಹಾರ ನ್ಯಾಯಮಂಡಳಿ ಪ್ರಕರಣಗಳು
4. ನೇರ ಮತ್ತು ಪರೋಕ್ಷ ತೆರಿಗೆ.
ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ಪೀಠದ ನೇತೃತ್ವವನ್ನು ನ್ಯಾ. ಸೂರ್ಯ ಕಾಂತ್ ವಹಿಸಿಕೊಳ್ಳಲಿದ್ದಾರೆ ಎಂದು ಸಿಜೆಐ ತಿಳಿಸಿದರು.
ಪೀಠಗಳ ವಿವರವಾದ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ನೇರ ಮತ್ತು ಪರೋಕ್ಷ ತೆರಿಗೆಗಳಿಗೆ ಸಂಬಂಧಿಸಿದಂತೆ, ವಿಶೇಷ ಪೀಠ ರಚನೆಯಾಗಲಿದೆ ಎಂದು ಸಿಜೆಐ ಮಂಗಳವಾರ ಹೇಳಿದ್ದರು.
ಬುಧವಾರ ಮತ್ತು ಗುರುವಾರಗಳಂದು ನೇರ ಮತ್ತು ಪರೋಕ್ಷ ಮಾರಾಟ ತೆರಿಗೆ ಪ್ರಕರಣಗಳಿಗೆ ಸಂಬಂಧಿಸಿದ ಪ್ರಕರಣಗಳನ್ನಷ್ಟೇ ಆಲಿಸಲಿರುವ ಪೀಠವೊಂದು ಮುಂದಿನವಾರ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ನಿನ್ನೆ ಪ್ರಸ್ತಾಪಿಸಿದ್ದರು.
ಕಳೆದ ವರ್ಷ ಅಕ್ಟೋಬರ್ನಲ್ಲಿ ಸುಪ್ರೀಂ ಕೋರ್ಟ್ನಲ್ಲಿ ತೆರಿಗೆ ಪೀಠವೊಂದರ ಅಗತ್ಯವಿದೆ ಎಂದು ಲಕ್ಷ್ಮೀಕುಮಾರನ್ ಮತ್ತು ಶ್ರೀಧರನ್ ತೆರಿಗೆ ಕಾನೂನು ಸಂಸ್ಥೆಯ ಸಂಸ್ಥಾಪಕ ಪಾಲುದಾರರಾದ ವಿ ಲಕ್ಷ್ಮೀಕುಮಾರನ್ ಸಲಹೆಗೆ ಸುಪ್ರೀಂ ಕೋರ್ಟ್’ನ ಅಂದಿನ ಮೂರನೇ ಹಿರಿಯ ನ್ಯಾಯಮೂರ್ತಿ ನ್ಯಾ. ಚಂದ್ರಚೂಡ್ ಮೆಚ್ಚುಗೆ ಸೂಚಿಸಿದ್ದರು. ಜೊತೆಗೆ ಅಂದಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ಬಳಿ ಈ ಸಲಹೆ ಪ್ರಸ್ತಾಪಿಸುವುದಾಗಿ ಹೇಳಿದ್ದರು.