ಮನೆ ರಾಷ್ಟ್ರೀಯ ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು

ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು

0

ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ “ಶೇ.40 ಕಮಿಷನ್‌ ಸರ್ಕಾರ’ ಎಂಬ ಜಾಹೀರಾತು ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

Join Our Whatsapp Group

ಪ್ರಕರಣದಲ್ಲಿ 4ನೇ ಆರೋಪಿಯಾಗಿರುವ ರಾಹುಲ್ ಗಾಂಧಿ ಅವರು ಇಂದು ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಗೆ ಹಾಜರಾಗಲಿದ್ದು, ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಮಾಜಿ ಸಂಸದ ಡಿಕೆ ಸುರೇಶ್ ಅವರು ಶ್ಯೂರಿಟಿ ನೀಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿಕೆ ಮಾಡಲಾಗಿದೆ.

2023ರ ಮೇ 5ರಂದು ಆಗ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಿವಿಧ ಪತ್ರಿಕೆಗಳಲ್ಲಿ ಜಾಹಿರಾತು ನೀಡಿ, “ಆಡಳಿತಾರೂಢ ರಾಜ್ಯ ಬಿಜೆಪಿ ಸರ್ಕಾರ ಶೇ. 40 ರಷ್ಟು ಕಮಿಷನ್‌ ಸರ್ಕಾರ, ಇದು ಕಳೆದ ನಾಲ್ಕು ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ಲೂಟಿ ಮಾಡಿದೆ’ ಎಂದು ಆರೋಪಿಸಿತ್ತು. ಈ ಬಗ್ಗೆ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ತಿನ ಸದಸ್ಯ ಬಿ.ಎಸ್‌. ಕೇಶವಪ್ರಸಾದ್‌ ಖಾಸಗಿ ದೂರು ಸಲ್ಲಿಸಿದ್ದರು.

ಅದನ್ನು “ಶಾಸಕರು- ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ 42ನೇ ಎಸಿಎಂಎಂ ಕೋರ್ಟ್‌ ವಿಚಾರಣೆಗೆ ಅಂಗೀಕರಿಸಿ ಆರೋಪಿಗಳಿಗೆ ಸಮನ್ಸ್‌ ಜಾರಿಗೊಳಿಸಿತ್ತು. ಅದರಂತೆ ಸಿಎಂ-ಡಿಸಿಎಂ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರ ಹಾಜರಿ ದಾಖಲಿಸಿಕೊಂಡು ಇಬ್ಬರಿಗೂ ತಲಾ ಐದು ಸಾವಿರ ನಗದು ಶ್ಯೂರಿಟಿ ಆಧಾರದಲ್ಲಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದರು. ಆದರೆ, ಕಾರಣಾಂತರಗಳಿಂದ ರಾಹುಲ್‌ ಗಾಂಧಿ ಹಾಜರಾಗಿರಲಿಲ್ಲ. ಈ ಸಂಬಂಧ ರಾಹುಲ್‌ ಗಾಂಧಿ ಪರ ಹಾಜರಾಗಿದ್ದ ವಕೀಲರು ಸಮಜಾಯಿಷಿಯನ್ನೂ ನೀಡಿದ್ದರು. ಆಗ ಜೂ. 7ರಂದು ಖುದ್ದು ಹಾಜರಾಗುವಂತೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಇಂದು ಕೋರ್ಟ್‌ಗೆ ಹಾಜರಾದರು.

ಹಿಂದಿನ ಲೇಖನಮಂಡ್ಯ: ಸೆಕ್ಯೂರಿಟಿ ಗಾರ್ಡ್ ಬೆದರಿಸಿ ಶಾಲಾ ಆವರಣದ ಗಂಧದ ಮರಗಳ ಕಳವು
ಮುಂದಿನ ಲೇಖನರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಅಂತ್ಯ: ಇಂದಿನಿಂದ ಸರ್ಕಾರದ ಪೂರ್ಣ ಪ್ರಮಾಣದ ಕೆಲಸ ಆರಂಭ