ಬೆಂಗಳೂರು: ಬಿಟ್ ಕಾಯಿನ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ನಂಬಿಸಿ ಎಂಜಿನಿಯರ್ ಗೆ ಅಪರಿಚಿತರು ಬರೋಬ್ಬರಿ 40 ಲಕ್ಷ ರೂ. ಟೋಪಿ ಹಾಕಿದ್ದಾರೆ.
ರಾಘವೇಂದ್ರ ಬಡಾವಣೆಯ ನಿವಾಸಿ ಭರತ್ (38) ವಂಚನೆಗೊಳಗಾದವರು.
ಭರತ್ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಭರತ್ ಮೊಬೈಲ್ ನಂಬರ್ ಅನ್ನು ಯಾರೋ ಅಪರಿಚಿತರು ಎನ್ ಕ್ರಿಪ್ಟ್ ಡಾಟಾ ಟ್ರೇಡಿಂಗ್ ಗ್ರೂಪ್ ಎಂಬ ವಾಟ್ಸ್ ಆ್ಯಪ್ ಗ್ರೂಪ್ ಗೆ ಸೇರಿಸಿದ್ದರು. ಈ ಗ್ರೂಪ್ ಕ್ರಿಪ್ಟೋ ಬಿಟ್ ಕಾಯಿನ್ ಟ್ರೇಡಿಂಗ್ ಬಗ್ಗೆ ಮಾಹಿತಿಯನ್ನು ನೀಡುವ ಗ್ರೂಪ್ ಆಗಿತ್ತು.
ನಂತರ ಅಪರಿಚಿತರು ಭರತ್ ಅವರನ್ನು ಆನ್ ಲೈನ್ ಮೂಲಕ ಸಂಪರ್ಕಿಸಿ ಬಿಟ್ ಕಾಯಿನ್ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನೀಡುವುದಾಗಿ ನಂಬಿಸಿ ಬಿನಾನ್ಸ್ ಅಪ್ಲಿಕೇಷನ್ ಮೂಲಕ ಹಣವನ್ನು ಯು.ಎಸ್ .ಡಿ.ಟಿಗೆ ಬದಲಾಯಿಸುವಂತೆ ತಿಳಿಸಿದ್ದರು.
ನಂತರ ಈ ಯು. ಎಸ್.ಡಿ.ಟಿ ಹಣವನ್ನು ಮೊಬೈಲ್ ಅಪ್ಲಿಕೇಶನ್ ನ ಅಪರಿಚಿತ ವ್ಯಾಲೆಟ್ ಗೆ ಹಂತ-ಹಂತವಾಗಿ 40 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡಿದ್ದರು. ನಂತರ ಲಾಭವನ್ನೂ ನೀಡದೇ, ಅಸಲು ದುಡ್ಡನ್ನೂ ಹಿಂತಿರುಗಿಸದೇ ವಂಚಿಸಿದ್ದಾರೆ. 40 ಲಕ್ಷ ರೂ. ದುಡ್ಡು ಕಳೆದುಕೊಂಡಿರುವ ಭರತ್ ಪಶ್ಚಿಮ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.