ನವದೆಹಲಿ (New Delhi): ‘ಅಗ್ನಿಪಥ’ ಯೋಜನೆಯಡಿ ಮುಂದಿನ ದಿನಗಳಲ್ಲಿ 40,000 ಯೋಧರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಅಗ್ನಿಪಥ ಯೋಜನೆಯಡಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳಿಗೆ 4 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಸೈನಿಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಂಗಳವಾರವಷ್ಟೇ ಘೋಷಣೆ ಮಾಡಿತ್ತು.
ಈ ಸಂಬಂಧ ಬುಧವಾರ ಮಾತನಾಡಿದ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಅವರು, ಮುಂದಿನ 180 ದಿನಗಳಲ್ಲಿ 25,000 ಅಗ್ನಿವೀರರನ್ನು ಭಾರತೀಯ ಸೇನೆಗೆ ನೇಮಿಸಿಕೊಳ್ಳಲಾಗುತ್ತದೆ. ಬಳಿಕ ಉಳಿದ 15,000 ಸೈನಿಕರ ನೇಮಕಾತಿಗೆ ಪ್ರಕ್ರಿಯೆ ಆರಂಭವಾಗಲಿದೆ. ದೇಶದಾದ್ಯಂತ 773 ಜಿಲ್ಲೆಗಳಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ಬದಲಾವಣೆಗೆ ರಕ್ಷಣಾ ಸಚಿವರು ಅಧಿಕಾರ ನೀಡಿದ್ದಾರೆ ಎಂದು ತಿಳಿಸಿದರು.
ಯೋಜನೆಯಡಿ ಹದಿನೇಳುವರೆ ವರ್ಷದಿಂದ 21 ವರ್ಷದವರೆಗಿನ 40,000 ಯೋಧರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.