ಮನೆ ರಾಷ್ಟ್ರೀಯ ಸೋನಿಯಾ ಗಾಂಧಿ, ಜೆಪಿ ನಡ್ಡಾ ಸೇರಿದಂತೆ 41 ಮಂದಿ ರಾಜ್ಯಸಭೆಗೆ ಅವಿರೋಧ ಆಯ್ಕೆ

ಸೋನಿಯಾ ಗಾಂಧಿ, ಜೆಪಿ ನಡ್ಡಾ ಸೇರಿದಂತೆ 41 ಮಂದಿ ರಾಜ್ಯಸಭೆಗೆ ಅವಿರೋಧ ಆಯ್ಕೆ

0

ನವದೆಹಲಿ: ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್, ಇತ್ತೀಚೆಗೆ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಅಶೋಕ್​ ಚವಾಣ್​ ಸೇರಿದಂತೆ 41 ಜನರು ವಿವಿಧ ರಾಜ್ಯಗಳಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕಡೆಯ ದಿನವಾಗಿದ್ದು, ಚುನಾವಣೆ ಘೋಷಣೆಯಾಗಿದ್ದ 56 ಸ್ಥಾನಗಳ ಪೈಕಿ 41 ರಲ್ಲಿ ಯಾವುದೇ ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು. ಇದರಲ್ಲಿ ಅತಿ ಹೆಚ್ಚು ಬಿಜೆಪಿ ಸಂಸದರೇ ಇದ್ದಾರೆ.

ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರು, ರಾಜಸ್ಥಾನದಿಂದ ರಾಜ್ಯಸಭೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಿದ್ದಾರೆ. ಇತ್ತೀಚೆಗಷ್ಟೇ ಅವರು ರಾಜಸ್ಥಾನದಿಂದ ಉಮೇದುವಾರಿಕೆ ಸಲ್ಲಿಸಿದ್ದರು. ಇವರ ವಿರುದ್ಧ ಯಾವುದೇ ಅಭ್ಯರ್ಥಿಯನ್ನು ಪಕ್ಷಗಳ ಹಾಕದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಗುಜರಾತ್ ​ನಿಂದ, ಕೇಂದ್ರ ಸಚಿವ ಅಶ್ವಿನಿ ವೈಷ್ಟವ್​ ಒಡಿಶಾದಿಂದ, ಎಲ್​ ಮುರುಗನ್​ ಮಧ್ಯಪ್ರದೇಶದಿಂದ, ಅಶೋಕ್​ ಚವಾಣ್​ ಮಹಾರಾಷ್ಟ್ರದಿಂದ, ಅಜಿತ್​ ಪವಾರ್​ ಬಣದ ಎನ್​ಸಿಪಿ ಸೇರಿರುವ ಮಿಲಿಂದ್​​ ದೇವ್ರಾ, ಪ್ರಪುಲ್​ ಪಟೇಲ್​ ಕೂಡ ಇದೇ ರಾಜ್ಯದಿಂದ ಆಯ್ಕೆಯಾಗಿದ್ದಾರೆ.

ಅವಿರೋಧ ಆಯ್ಕೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. 20 ಸ್ಥಾನಗಳಲ್ಲಿ ಕಮಲ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ 6, ಟಿಎಂಸಿ 4, ವೈಎಸ್​ ಆರ್​ ಸಿಪಿ 3, ಬಿಜೆಡಿ, ಆರ್ ​​ಜೆಡಿ ತಲಾ 2, ಎನ್​ಸಿಪಿ, ಶಿವಸೇನೆ ಬಿಆರ್​ಎಸ್​, ಜೆಡಿಯು ತಲಾ 1 ಸ್ಥಾನದಲ್ಲಿ ಜಯ ಕಂಡಿವೆ.

ಉಳಿದ 15 ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ. ಅದರಲ್ಲಿ 15 ಸ್ಥಾನಗಳು ಉತ್ತರ ಪ್ರದೇಶದಿಂದ 10, ಕರ್ನಾಟಕದ 4 ಮತ್ತು ಹಿಮಾಚಲದ ಒಂದು ಸ್ಥಾನ ಒಳಗೊಂಡಿವೆ. ರಾಜಕೀಯ ಪ್ರತಿಸ್ಪರ್ಧಿಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಚುನಾವಣೆ ಎದುರಾಗಿದೆ. ವಿಶೇಷವಾಗಿ ಉತ್ತರಪ್ರದೇಶ ಮತ್ತು ಕರ್ನಾಟಕದಲ್ಲಿ ತೀವ್ರ ಸ್ಪರ್ಧೆ ಇರುವ ನಿರೀಕ್ಷೆ ಇದೆ.