ಬೆಂಗಳೂರು(Bengaluru): ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕರು ಕೇಳುವ ಮಾಹಿತಿಯನ್ನು ಸಕಾಲದಲ್ಲಿ ಒದಗಿಸದೆ ವಿಳಂಬ ಧೋರಣೆ ತೋರಿ ಬೇಜವಬ್ದಾರಿಯಿಂದ ವರ್ತಿಸುವ ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಆಯೋಗವು ನಾಲ್ಕು ತಿಂಗಳಲ್ಲಿ ಬರೋಬ್ಬರಿ ಐವತ್ತು ಲಕ್ಷ ರೂಪಾಯಿ ದಂಡ ವಿಧಿಸಿದೆ.
ನಿಯಮಾನುಸಾರ ಮಾಹಿತಿ ಒದಗಿಸದೆ ದಂಡ ಪಾವತಿಸುವಂತಾಗಿರುವ ಅಧಿಕಾರಿಗಳ ಪೈಕಿ ತಹಸೀಲ್ದಾರ್’ಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ (ಪಿಡಿಓ) ಅಧಿಕ ಸಂಖ್ಯೆಯಲ್ಲಿದ್ದಾರೆ.
ಗರಿಷ್ಠ 25,000 ರೂ. ದಂಡ ಶಿಕ್ಷೆಗೆ ಗುರಿಯಾದವರ ಪಟ್ಟಿಯೂ ದೊಡ್ಡದಿದೆ. ಮಹತ್ವದ ಸೇವೆ ಒದಗಿಸುವ ಜವಬ್ದಾರಿಯುತ ಸ್ಥಾನದಲ್ಲಿರುವವರೇ ಮಾಹಿತಿ ನೀಡದೆ ಸತಾಯಿಸುತ್ತಿದ್ದು, ಇದರಿಂದಾಗಿ ಸಾರ್ವಜನಿಕರು ಸರಕಾರಿ ಸೇವೆ ಪಡೆಯಲು ಪರದಾಡುವಂತಾಗಿದೆ.
ಸರ್ಕಾರದ ಬಹುತೇಕ ಇಲಾಖೆಗಳಲ್ಲಿನ ಸೇವೆ, ಚಟುವಟಿಕೆ ಇತರ ವಿಷಯಗಳ ಕುರಿತು ವಿವರವನ್ನು ಮಾಹಿತಿ ಹಕ್ಕು ಕಾಯಿದೆಯಡಿ ಪಡೆಯಲು ಅವಕಾಶವಿದೆ. ಅದರಂತೆ ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ ಸಂಬಂಧಪಟ್ಟ ಮಾಹಿತಿ ಅಧಿಕಾರಿಕಾರಿ ಒದಗಿಸಬೇಕು. ಒಂದೊಮ್ಮೆ ಮಾಹಿತಿ ಒದಗಿಸದಿದ್ದರೆ ಮೇಲಾಧಿಕಾರಿಗೆ ಮೊದಲ ಮೇಲ್ಮನವಿ ಸಲ್ಲಿಸಲು ಅವಕಾಶವಿರಲಿದೆ. ಅದರಂತೆ 15 ದಿನದಲ್ಲಿ ಮೇಲಾಧಿಕಾರಿ ಮಾಹಿತಿ ಒದಗಿಸಬೇಕು. ಅಲ್ಲಿಯೂ ಅರ್ಜಿದಾರರಿಗೆ ಮಾಹಿತಿ ಸಿದಿದ್ದರೆ ಅವರು ರಾಜ್ಯ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.
30,000 ಕ್ಕೂ ಹೆಚ್ಚು ಪ್ರಕರಣ
ಸಕಾಲದಲ್ಲಿ ಮಾಹಿತಿ ಒದಗಿಸದಿರುವುದಕ್ಕೆ ಸಂಬಂಧಪಟ್ಟಂತೆ ಆಯೋಗಕ್ಕೆ ಮೇಲ್ಮನವಿ ಸಲ್ಲಿಕೆಯಾಗಿರುವ ಪ್ರಕರಣಗಳ ಸಂಖ್ಯೆ 30,000 ಕ್ಕೂ ಹೆಚ್ಚಿದೆ. ಅರ್ಜಿದಾರರಿಗೆ ಸರಿಯಾಗಿ ಮಾಹಿತಿ ನೀಡದಿರುವುದು, ಉಡಾಫೆ ಉತ್ತರ ಒದಗಿಸುವ ಪ್ರಕರಣಗಳು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲೇ ಹೆಚ್ಚು ಎಂದು ಮೂಲಗಳು ತಿಳಿಸಿವೆ.
ಅರ್ಜಿದಾರರು ಕೋರಿದ ಮಾಹಿತಿಯನ್ನು ನಿಯಮಾನುಸಾರ ಒದಗಿಸುವಲ್ಲಿ ವಿಳಂಬವಾಗುತ್ತಿರುವುದಕ್ಕೆ ನಾನಾ ಮಾಹಿತಿ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ಕಾರಣವಿರುತ್ತದೆ. ಜತೆಗೆ ಕಾಯಿದೆಯ ಅರಿವು, ಮಾಹಿತಿ ಕೊರತೆ, ತಪ್ಪು ತಿಳುವಳಿಕೆ ಕಾರಣಕ್ಕೂ ಉಡಾಫೆ ಉತ್ತರ ನೀಡುವ ಸಾಧ್ಯತೆ ಇರುತ್ತದೆ. ಉದ್ದೇಶಪೂರ್ವಕವಾಗಿ ಮಾಹಿತಿ ನೀಡದ ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿರುತ್ತವೆ ಎಂದು ಹೇಳಿವೆ.
53 ಲಕ್ಷ ರೂ. ದಂಡ
ಎರಡನೇ ಮೇಲ್ಮನವಿ ಸಲ್ಲಿಕೆಯಾಗುವ ಪ್ರಕರಣಗಳ ವಿಚಾರಣೆ ನಡೆಸುವ ಆಯೋಗವು ಪ್ರಕರಣದ ತೀವ್ರತೆ ಅನುಸಾರ ಗರಿಷ್ಠ 25,000 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಅದರಂತೆ ಕಳೆದ ಸೆಪ್ಟಂಬರ್’ನಿಂದ ಡಿಸೆಂಬರ್’ವರೆಗೆ ಕೇವಲ ನಾಲ್ಕು ತಿಂಗಳಲ್ಲಿ ಆಯೋಗವು ಮಾಹಿತಿ ನೀಡದ ಅಧಿಕಾರಿಗಳಿಗೆ 53.31 ಲಕ್ಷ ರೂ. ದಂಡ ವಿಧಿಸಿದೆ. ಎಂಟನೇ ಪೀಠ ಇದೇ ಅವಧಿಯಲ್ಲಿ 32 ಲಕ್ಷ ರೂ.ದಂಡ ವಿಧಿಸಿರುವುದು ಗಮನಾರ್ಹ.
ಆರ್’ಡಿಪಿಆರ್ – ಕಂದಾಯ ಪ್ರಕರಣ ಹೆಚ್ಚು
ಜನರಿಗೆ ಮಹತ್ವದ ಸೇವೆಗಳನ್ನು ಒದಗಿಸುವಂತಹ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಪಟ್ಟಂತೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಸುಮಾರು 30, 000 ಪ್ರಕರಣಗಳ ಪೈಕಿ 10,000 ಪ್ರಕರಣಗಳು ಇದೇ ಇಲಾಖೆಗೆ ಸಂಬಂಧಪಟ್ಟದ್ದಾಗಿದೆ. ಪಿಡಿಒಗಳು ಮಾಹಿತಿ ಒದಗಿಸದಿರುವ ಪ್ರಕರಣಗಳೇ ಅಧಿಕವಾಗಿವೆ. ನಂತರದ ಸ್ಥಾನದಲ್ಲಿ ಕಂದಾಯ ಇಲಾಖೆ ಇದೆ. ಬಹಳಷ್ಟು ಪ್ರಕರಣಗಳಲ್ಲಿ ಪಿಡಿಒ, ತಹಸೀಲ್ದಾರ್’ಗಳಿಗೆ ಗರಿಷ್ಠ 25,000 ರೂ.ದಂಡವನ್ನು ವಿಧಿಸಿರುವುದು ಕಾಣುತ್ತದೆ. ಹೆಚ್ಚುವರಿ ಜಿಲ್ಲಾಧಿಕಾರಿಗಳು, ವಿಶೇಷ ಜಿಲ್ಲಾಧಿಕಾರಿಗಳು, ವಿಶೇಷ ಭೂಸ್ವಾಧೀನಾಧಿಕಾರಿಗಳು, ನಾನಾ ಇಲಾಖೆಗಳ ನಾನಾ ಶ್ರೇಣಿಯ ಇಂಜಿನಿಯರ್’ಗಳು ಕೂಡ ದಂಡ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಕೆಳಹಂತದ ಅಧಿಕಾರಿಗಳು ಮಾತ್ರವಲ್ಲದೇ ಹಿರಿಯ ಅಧಿಕಾರಿಗಳು ಅರ್ಜಿ ದಾರರಿಗೆ ಸಕಾಲದಲ್ಲಿ ಮಾಹಿತಿ ನೀಡದಿರುವುದು ಸ್ಪಷ್ಟವಾಗುತ್ತದೆ.