ಕೊಪ್ಪಳ: ಯಾದಗಿರಿ ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪರಶುರಾಮ ಪತ್ನಿಗೆ ಇಲಾಖೆಯಲ್ಲಿ ಸೂಕ್ತವಾದ ಕೆಲಸ ಕೊಡುತ್ತೇವೆ. ರಾಯಚೂರು ಕೃಷಿ ವಿವಿ ಅಥವಾ ಜೆಸ್ಕಾಂನಲ್ಲಿ ಕೆಲಸ ಕೊಡುವಂತೆ ಕೇಳಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತನಾಡುತ್ತೇನೆ. ಗೃಹ ಇಲಾಖೆ ಹಾಗೂ ಸರ್ಕಾರದಿಂದ 50 ಲಕ್ಷ ಹಣ ನೀಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಂದು (ಆ.07) ಮೃತ ಪಿಎಸ್ಐ ಪರಶುರಾಮ ಅವರ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ಮತ್ತು ಅವರ ಪುತ್ರನ ಮೇಲೆ ಆರೋಪ ಮಾಡಿದ್ದಾರೆ. ತನಿಖೆಗೆ ಆದೇಶ ಮಾಡಿದ್ದೇನೆ. ಆರೋಪ ಕೇಳಿಬಂದ ದಿನವೇ ಸಿಐಡಿ ತನಿಖೆಗೆ ಪ್ರಕರಣವನ್ನು ನೀಡಿದ್ದೇವೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಯಾರು ಕೂಡ ಹಣ ತೆಗೆದುಕೊಂಡು ವರ್ಗಾವಣೆ ಮಾಡಲ್ಲ. ವರ್ಗಾವಣೆಗೆ ಎರಡು ವರ್ಷ ನಿಗದಿ ಮಾಡಿದ್ದೇವೆ ಎಂದು ತಿಳಿಸಿದರು.
ನಾನು ವಿರೋಧ ಪಕ್ಷದವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲ್ಲ. ಸಿಬಿಐಗೆ ನೀಡುವ ಅರ್ಹತೆ ಈ ಪ್ರಕರಣದಲ್ಲಿ ಇಲ್ಲ. ಆದರೆ ಕುಟುಂಬಕ್ಕೆ ನ್ಯಾಯ ದೊರಕಿಸುವ ಕೆಲಸ ಮಾಡುತ್ತೇವೆ. ಅವರಿಗೆ ನ್ಯಾಯ ಸಿಗದೆ ಇದ್ದರೆ ಮುಂದೆ ನೋಡೋಣ. ಪರಶುರಾಮ ಅವರು ಏಳು ತಿಂಗಳಲ್ಲೇ ಹೇಗೆ ವರ್ಗಾವಣೆಯಾದರು ಅಂತ ನನಗೆ ಗೊತ್ತಿಲ್ಲ. ಅವದಿಗೂ ಮೊದಲೇ ವರ್ಗಾವಣೆ ಬಗ್ಗೆ ಕೂಡ ಸಿಐಡಿ ತನಿಖೆಯಲ್ಲಿ ಹೊರಗೆ ಬರುತ್ತದೆ ಎಂದು ಹೇಳಿದರು.
ಎಫ್ಐಆರ್ ದಾಖಲಾಗಲು ವಿಳಂಬವಾಗಿಲ್ಲ. ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಂತರ ಎಫ್ಐಆರ್ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಾದ ನಂತರ ದೂರು ದಾಖಲಾಗುತ್ತದೆ. ನಂತರ ಆರೋಪಿಗಳನ್ನು ಬಂಧಿಸಲಾಗುತ್ತದೆ. ಆರ್ ಅಶೋಕ್ ಅವರು ಗೃಹ ಸಚಿವರಾಗಿದ್ದರು. ಅವರು ಇದ್ದಾಗ ಸಿಐಡಿ ಚೆನ್ನಾಗಿತ್ತಾ? ಎಂದು ತಿರುಗೇಟು ನೀಡಿದರು.
ವರ್ಗಾವಣೆಗೆ ಹಣ ಪಡೆಯಾಲಾಗಿದೆ ಎಂದು ಕುಟುಂಬ ಆರೋಪ ಮಾಡಿದೆ. ಆದರೆ ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಭ್ರಷ್ಟಾಚಾರ ನಿಲ್ಲಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತೇವೆ. ಇದಕ್ಕಾಗಿ ಸಮಯಬೇಕು ಎಂದು ಹೇಳಿದರು.
ರಾಜ್ಯದಲ್ಲಿ ವರ್ಗಾವಣೆ ದಂಧೆ ಇದೆ ಎಂಬ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅದು ಅವರ ವ್ಯಯಕ್ತಿಕ ವಿಚಾರ. ನಾನು ಗಾಳಿಯಲ್ಲಿ ಗುಂಡು ಹೊಡೆಯಲ್ಲ. ವರ್ಗಾವಣೆಗೆ ಯಾರು ಹಣ ಪಡೆಯುತ್ತಾರೆ ಅಂತ ಅವರು ಹೆಸರು ಹೇಳಿದರೆ ಅದರ ಬಗ್ಗೆ ತನಿಖೆ ಮಾಡೋಣ ಎಂದರು.
ರಾಜಪಾಲರು ಸಿಎಂಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಶೋಕಾಸ್ ನೀಡಿದ್ದೆ ತಪ್ಪು, ಅದನ್ನು ಹಿಂಪಡೆಯರಿ ಅಂತ ಸಂಪುಟದಲ್ಲಿ ಚರ್ಚಿಸಿ ಸಲಹೆ ನೀಡಿದ್ದೇವೆ. ಅವರು ಅದನ್ನು ಪಡೆಯಬಹುದು, ಇಲ್ಲವೇ ಬಿಡಬಹುದು. ನಾವು ನೀಡಿರುವ ಸಲಹೆಯನ್ನು ಅವರು ಹಾಗೆ ಇಟ್ಟುಕೊಂಡಿದ್ದಾರೆ. ರಾಜೀನಾಮೆ ನೀಡಲು ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ಪ್ರಾಸಿಕ್ಯೂಷನ್ ಗೆ ಕೊಟ್ಟರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.