ರಾಯಚೂರು : ಮಧ್ಯಪ್ರಾಚ್ಯ ದೇಶಗಳ ಯುದ್ಧದ ಪರಿಣಾಮದಿಂದಾಗಿ ರೈಸ್‌ಮಿಲ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಶೇ.50ರಷ್ಟು ಅಕ್ಕಿ ಉತ್ಪಾದನೆ ಸ್ಥಗಿತಕೊಂಡಿದ್ದು, ಸುಮಾರು 200 ಕೋಟಿ ರೂ. ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.
ರಾಯಚೂರು ನಗರವೊಂದರಲ್ಲೇ ಇರುವ 95 ರೈಸ್‌ಮಿಲ್‌ಗಳಿಂದ ಹೊರದೇಶಗಳಿಗೆ ರಫ್ತಾಗುತ್ತಿದ್ದ ಅಕ್ಕಿ ವ್ಯಾಪಾರಕ್ಕೆ ಸಂಕಷ್ಟ ಎದುರಾಗಿದೆ. ಮಧ್ಯಪ್ರಾಚ್ಯ ದೇಶಗಳಾದ ಅರಬ್, ಆಫ್ರಿಕನ್ ದೇಶಗಳು, ಬಾಂಗ್ಲಾ, ದುಬೈ, ಶ್ರೀಲಂಕಾಗೆ ಅಕ್ಕಿ ವ್ಯಾಪಾರ ಬಂದ್ ಆಗಿದೆ. ರಫ್ತು ಬಂದಾಗಿರುವುದಕ್ಕೆ ಪ್ರತಿ ತಿಂಗಳು ನಡೆಯುತ್ತಿದ್ದ 150ರಿಂದ 200 ಕೋಟಿ ರೂ. ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.
ಹೊರದೇಶಕ್ಕೆ ಹೋಗುತ್ತಿದ್ದ ಸೋನಾಮಸೂರಿ, ಬಾಸುಮತಿ, ಆರ್‌ಎನ್‌ಆರ್ ಅಕ್ಕಿ ದಾಸ್ತಾನು ಗೋದಾಮಿನಲ್ಲೇ ಉಳಿದಿದೆ. ಯುದ್ಧದ ಎಫೆಕ್ಟ್‌ನಿಂದಾಗಿ ಶೇ.50ರಷ್ಟು ಭತ್ತದ ಸಂಸ್ಕರಣೆ ಸ್ಥಗಿತವಾಗಿದ್ದು, ದೇಶೀಯ ಸರಬರಾಜಿಗಾಗಿ ಶೇ.50ರಷ್ಟು ಮಾತ್ರ ಅಕ್ಕಿ ತಯಾರಿಕೆ ನಡೆದಿದೆ.
ಪ್ರತಿ ತಿಂಗಳು ರಾಯಚೂರಿನಿಂದ 15 ರೇಕ್‌ಗಳಲ್ಲಿ ಹೋಗುತ್ತಿದ್ದ 37,500 ಟನ್ ಅಕ್ಕಿ ಉತ್ಪಾದನೆ ಸ್ಥಗಿತವಾಗಿದೆ. ಯುದ್ಧ ಆರಂಭವಾದ ಬಳಿಕ ಒಂದೂ ರೇಕ್ ಅಕ್ಕಿಯೂ ಸರಬರಾಜಾಗದೇ ಆರ್ಥಿಕ ಸಂಕಷ್ಟ ಎದುರಾಗಿದೆ ಅಂತ ರೈಸ್ ಮಿಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಪರಿಸ್ಥಿತಿ ಮುಂದುವರೆದರೆ ರೈತರ ಭತ್ತ ಖರೀದಿ ಪ್ರಮಾಣವೂ ಕಡಿಮೆಯಾಗಿ ರೈತರಿಗೆ ಸಂಕಷ್ಟ ಎದುರಾಗಲಿದೆ.















