ದೆಹಲಿಯಲ್ಲಿ 53 ಸಾವಿರ ಪೊಲೀಸ್ ಅಧಿಕಾರಿಗಳು ಅಕ್ರಮವಾಗಿ ಸೈಕಲ್ ನಿರ್ವಹಣಾ ವೆಚ್ಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಹಾಗೂ ದೆಹಲಿ ಪೊಲೀಸ್ ಆಯುಕ್ತರಿಗೆ ದೆಹಲಿ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.
ಓಡಾಟಕ್ಕೆ ಯಾವುದೇ ಒಬ್ಬ ಅಧಿಕಾರಿ ಸೈಕಲ್ ಬಳಕೆ ಮಾಡದಿದ್ದರೂ ಸೈಕಲ್ ನಿರ್ವಹಣಾ ವೆಚ್ಚ ಪಡೆಯುತ್ತಿದ್ದಾರೆ. ಇದಕ್ಕೆ ವಾರ್ಷಿಕವಾಗಿ ₹11 ಕೋಟಿ ವೆಚ್ಚವಾಗುತ್ತಿದೆ. ಈ ಸಂಬಂಧ ತನಿಖೆ ನಡೆಸಬೇಕು ಎಂದು ಕೋರಿ ವಕೀಲ ಸನ್ಸೀರ್ ಪಾಲ್ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಮ್ ಪ್ರಸಾದ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಆರು ವಾರಗಳ ಕಾಲಾವಕಾಶ ನೀಡಿರುವ ಪೀಠವು ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿದೆ.
ಸೈಕಲ್ ನಿರ್ವಹಣೆ ವೆಚ್ಚವಾಗಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗೆ ಮಾಸಿಕವಾಗಿ ₹180 ನೀಡಲಾಗುತ್ತಿದೆ ಎಂಬ ವಿಚಾರ ತಿಳಿದು ಬಂದಿದೆ. ಆದರೆ, ಬಹುತೇಕ ಅಧಿಕಾರಿಗಳು ಸೈಕಲ್ ಬಳಕೆ ಮಾಡದಿರುವುದರಿಂದ ಇದು ಭ್ರಷ್ಟಾಚಾರಕ್ಕೆ ನಾಂದಿ ಎಂದು ಸಿಂಗ್ ಮನವಿಯಲ್ಲಿ ಆಕ್ಷೇಪಿಸಿದ್ದಾರೆ. ಈ ಸಂಬಂಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ.