ಬೆಂಗಳೂರು: ಅನಧಿಕೃತ ಸ್ವತ್ತುಗಳನ್ನು ಆಸ್ತಿ ತೆರಿಗೆಗೆ ಒಳಪಡಿಸಿ ಬಿ ಖಾತಾ ನೀಡುವ ಅಭಿಯಾನದಿಂದಾಗಿ ರಾಜ್ಯದ 55 ಲಕ್ಷ ಮನೆಗಳ ಮಾಲೀಕರಿಗೆ ಉಪಯೋಗವಾಗಲಿದೆ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಅಕ್ರಮ ಹಾಗೂ ಕಾನೂನುಬಾಹಿರ ನಿವೇಶನ ಅಥವಾ ಜಮೀನು ಹೊಂದಿರುವ ಮಾಲೀಕರಿಗೆ ಬಿ ಖಾತಾ ನೀಡಲು ಇ-ಆಸ್ತಿ ತಂತ್ರಾಂಶದಲ್ಲಿ ಅನುವು ಮಾಡಿಕೊಡಲಾಗಿದೆ. ಹಲವು ವರ್ಷಗಳಿಂದ ಭೂಮಿ ಹೊಂದಿದ್ದರೂ ದಾಖಲಾತಿ ಇಲ್ಲದ ಕಾರಣ ಸರ್ಕಾರಕ್ಕೆ ತೆರಿಗೆ ನಷ್ಟವಾಗುತಿತ್ತು. ಅಂತಹ ಭೂ ಮಾಲೀಕರನ್ನು ಗುರುತಿಸಿ ಒಂದು ಬಾರಿ ಬಿ ಖಾತಾ ನೀಡುವ ಅಭಿಯಾನ ಕೈಗೊಂಡಿದ್ದು, ಸೂಕ್ತ ಭೂ ದಾಖಲಾತಿ ಇಲ್ಲದ ಮಾಲೀಕರಿಗೆ ಮೂರು ತಿಂಗಳೊಳಗಾಗಿ ಬಿ ಖಾತಾ ನೀಡಲಾಗುವುದು ಎಂದು ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಗ್ ನಾಯಕ್ ಪ್ರಶ್ನೆಗೆ ಪೌರಾಡಳಿತ ಇಲಾಖೆ ಸಚಿವ ರಹೀಂಖಾನ್ ಪರವಾಗಿ ಸುರೇಶ್ ಮಾಹಿತಿ ನೀಡಿದರು.
ಬೆಂಗಳೂರು ನಗರ ಗುರಿಯಾಗಿಸಿಕೊಂಡು ಬಿ ಖಾತಾ ನೀಡುವುದು ಸರಿಯಿದೆ. ಆದರೆ, ಇದನ್ನು ರಾಜ್ಯಕ್ಕೆ ವಿಸ್ತರಿಸಕೂಡದು. ಸರ್ಕಾರಕ್ಕೆ ತೆರಿಗೆ ಬಂದಿದ್ದರೂ ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೂಕ್ತ ದಾಖಲಾತಿ ಇರುವವರಿಗೆ ರಿಯಾಯಿತಿ ಜೊತೆಗೆ ಫಾರ್ಮ್ ಸಂಖ್ಯೆ 3ನ್ನು ನೀಡಿದರೆ ಅನುಕೂಲವಾಗಲಿದೆ ಎಂಬ ಪ್ರತಾಪ್ ನಾಯಕ್ ಮರುಪ್ರಶ್ನೆಗೆ ಉತ್ತರಿಸಿದ ಬೈರತಿ ಸುರೇಶ್, ಎ ಹಾಗೂ ಬಿ ಖಾತಾ ಎಂಬುದು ಬೆಂಗಳೂರಿನಲ್ಲಿತ್ತು. ಅಧಿಕೃತ ದಾಖಲಾತಿ ಇಲ್ಲದೆ ಪೂರ್ವಜರು ನೀಡಿದ ದಾಖಲೆಗಳನ್ನು ಇಟ್ಟುಕೊಂಡು ಮನೆ ಕಟ್ಟಿಕೊಂಡಿದ್ದರು. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿ ಮೂಲಸೌಕರ್ಯ ಒದಗಿಸಿದರೂ ತೆರಿಗೆ ಬರುತ್ತಿರಲಿಲ್ಲ. ಹೀಗಾಗಿ ಅವರನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಬಿ ಖಾತಾ ನೀಡುವ ನಿರ್ಧಾರದಿಂದ 55 ಲಕ್ಷ ಮನೆಗಳಿಗೆ ಲಾಭವಾಗಿದೆ ಎಂದು ಮಾಹಿತಿ ಒದಗಿಸಿದರು.














