ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಯೊಬ್ಬರು ಅನಾರೋಗ್ಯದಿಂದ ಗಂಭೀರ ಪರಿಸ್ಥಿತಿಯಲ್ಲಿರುವ 75 ವರ್ಷದ ತಮ್ಮ ವೃದ್ಧ ತಾಯಿಯನ್ನು ಭೇಟಿ ಮಾಡಿ ಅವರ ಜೊತೆಗಿರಲು ಅವಕಾಶ ಕಲ್ಪಿಸಿರುವ ಹೈಕೋರ್ಟ್, ಮೂರು ವಾರಗಳ ಪೆರೋಲ್ ನೀಡಿ ಆದೇಶಿಸಿದೆ.
ಪೆರೋಲ್ ನೀಡಲು ನಿರಾಕರಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬಯಲು ಬಂದಿಖಾನೆ ಅಧೀಕ್ಷಕರ ಕ್ರಮವನ್ನು ಪ್ರಶ್ನಿಸಿ ಕೈದಿ ಶಿವಪ್ಪ ಬೆಲ್ಲದ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
‘ಜನನಿ ಜನ್ಮಭೂಮಿಶ್ಚ; ಸ್ವರ್ಗಾದಪಿ ಗರೀಯಸಿ’ ಎಂಬ ವಾಲ್ಮೀಕಿ ರಾಮಾಯಣದ ಶ್ಲೋಕವನ್ನು ಉಲ್ಲೇಖಿಸಿರುವ ನ್ಯಾಯಪೀಠವು, ಮರಣಶಯ್ಯೆಯಲ್ಲಿರುವ ತಾಯಿ ತನ್ನ ಮಗನನ್ನು ನೋಡಲು ಬಯಸುವ ಹಕ್ಕುಗಳನ್ನು ಹೊಂದಿರುವಂತೆಯೇ, ತಾಯಿಯನ್ನೂ ನೋಡುವ ಹಕ್ಕನ್ನು ಮಗ ಹೊಂದಿರುತ್ತಾನೆ ಎಂದು ನ್ಯಾಯಪೀಠ ವ್ಯಾಖ್ಯಾನಿಸಿದೆ.
ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲಾದದ್ದು. ಸಾವಿನ ಅಂಚಿನಲ್ಲಿರುವ ತಾಯಿಯನ್ನು ಕಾಣಲು ಮಕ್ಕಳ ಹಂಬಲ ಮತ್ತು ಮಕ್ಕಳನ್ನು ನೋಡಲು ತಾಯಿ ವ್ಯಕ್ತಪಡಿಸುವ ಹಂಬಲ ನ್ಯಾಯಸಮ್ಮತವಾಗಿರುತ್ತದೆ. ಆದ್ದರಿಂದ, ಈ ಪ್ರಕರಣದಲ್ಲಿ ಅರ್ಜಿದಾರನಿಗೆ ತಾಯಿಯನ್ನು ಕಾಣುವ ಅವಕಾಶ ನಿರಾಕರಿಸಲು ಹಾಗೂ ಮಗನನ್ನು ನೋಡಬೇಕೆಂಬ ತಾಯಿಯ ಆಸೆಯನ್ನು ಕಸಿದುಕೊಳ್ಳಲು ನ್ಯಾಯಾಲಯಕ್ಕೆ ಯಾವುದೇ ಕಾರಣ ಕಂಡು ಬಂದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯನ್ನು ಕಾಣಲು ಅವಕಾಶ ನೀಡುವಂತೆ ಶಿವಪ್ಪ ಕೋರಿದ್ದರು. ಆದರೆ, ಇದನ್ನು ಜೈಲು ಅಧಿಕಾರಿ ನಿರಾಕರಿಸಿದ್ದರು.