ಬೆಂಗಳೂರು (Bengaluru): 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಸಲುವಾಗಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ವಿಶೇಷ ಪಂದ್ಯ ಆಯೋಜನೆಗೆ ಮುಂದಾಗಿದೆ.
ಸೆಪ್ಟೆಂಬರ್ 16ರಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿ ಶುರುವಾಗಲಿದ್ದು, ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸಾರಥ್ಯದ ಇಂಡಿಯಾ ಮಹಾರಾಜಾಸ್ ತಂಡ ಐಯಾನ್ ಮಾರ್ಗನ್ ನೇತೃತ್ವದ ವರ್ಲ್ಡ್ ಜಯಂಟ್ಸ್ ಎದುರು ಪೈಪೋಟಿ ನಡೆಸಲಿದೆ.
ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ನಾಲ್ಕು ತಂಡಗಳ ನಡುವಣ ಟೂರ್ನಿಯ ಉದ್ಘಾಟನಾ ಪಂದ್ಯ ಇದಾಗಲಿದೆ.
10 ವಿದೇಶಿ ತಂಡಗಳ ಆಟಗಾರರನ್ನು ಒಗ್ಗೂಡಿಸಿ ವರ್ಲ್ಡ್ ಜಯಂಟ್ಸ್ ತಂಡವನ್ನು ರಚಿಸಲಾಗಿದೆ. ಜಾಕ್ ಕಾಲಿಸ್, ಡೇಲ್ ಸ್ಟೇನ್, ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್, ಬ್ರೆಟ್ ಲೀ ಮತ್ತು ಹರ್ಷಲ್ ಗಿಬ್ಸ್ ಅವರಂತಹ ಆಟಗಾರರು ವಿಶ್ವ ತಂಡದಲ್ಲಿದ್ದಾರೆ. ಮತ್ತೊಂದೆಡೆ ಇಂಡಿಯಾ ಮಹಾರಾಜಾಸ್ ತಂಡದಲ್ಲಿ ಸೌರವ್ ಹೊರತಾಗಿ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಅವರಂತಹ ದಿಗ್ಗಜ ಆಟಗಾರರು ಆಡಲಿದ್ದಾರೆ.
ಪ್ರದರ್ಶನ ಪೂರ್ವ ಪಂದ್ಯದ ಬಳಿಕ ಸೆಪ್ಟೆಂಬರ್ 17ರಿಂದ ಟೂರ್ನಿಯ ಲೀಗ್ ಪಂದ್ಯಗಳು ಶುರುವಾಗಲಿದೆ. ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ಜರುಗಲಿದ್ದು, ಆರು ನಗರಗಳಲ್ಲಿ ಪಂದ್ಯಗಳ ಆಯೋಜನೆ ಆಗಲಿದೆ. ಲೀಗ್ ಕುರಿತಾಗಿ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ, 75ನೇ ಸ್ವಾತಂತ್ರ್ಯೋತ್ಸವ ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ದಿನ. ಇದನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ವಿಶೇಷ ಪಂದ್ಯ ಆಯೋಜಿಸಲಾಗುತ್ತಿದೆ ಎಂದಿದ್ದಾರೆ.
ಇಂಡಿಯಾ ಮಹಾರಾಜಾಸ್ ತಂಡ
ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸುಬ್ರಮಣ್ಯನ್ ಬದ್ರೀನಾಥ್, ಇರ್ಫಾನ್ ಫಠಾಣ್, ಪಾರ್ಥಿವ್ ಪಟೇಲ್ (ವಿಕೆಟ್‌ಕೀಪರ್), ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ (ವಿಕೆಟ್‌ಕೀಪರ್), ಅಶೋಕ್ ದಿಂಡಾ, ಪ್ರಜ್ಞಾನ್ ಓಜಾ, ಅಜಯ್ ಜಡೇಜಾ, ಆರ್.ಪಿ ಸಿಂಗ್, ಜೋಗಿಂದರ್ ಶರ್ಮಾ, ರೀತಿಂದರ್ ಸಿಂಗ್ ಸೋಢಿ.
ವರ್ಲ್ಡ್ ಜಯಂಟ್ಸ್ ತಂಡ
ಐಯಾನ್ ಮಾರ್ಗನ್ (ನಾಯಕ), ಲೆಂಡ್ಲ್ ಸಿಮನ್ಸ್, ಹರ್ಷಲ್ ಗಿಬ್ಸ್, ಜಾಕ್ ಕಾಲಿಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಿಯರ್ (ವಿಕೆಟ್‌ಕೀಪರ್), ನೇಥನ್ ಮೆಕಲಮ್, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇನ್, ಹ್ಯಾಮಿಲ್ಟನ್ ಮಜಕಡ್ಜ, ಮಶ್ರಫೆ ಮೊರ್ತಾಝ, ಅಸ್ಗರ್ ಅಫ್ಘಾನ್, ಮಿಚೆಲ್ ಜಾನ್ಸನ್, ಬ್ರೆಟ್ ಲೀ, ಕೆವಿನ್ ಓ’ಬ್ರಿಯನ್, ದಿನೇಶ್ ರಾಮ್ದಿನ್ (ವಿಕೆಟ್‌ಕೀಪರ್).