ಮೈಸೂರು: ಮೈಸೂರು ವಿಭಾಗವು 75ನೇ ಗಣರಾಜ್ಯೋತ್ಸವವನ್ನು ಮೈಸೂರಿನ ರೈಲ್ವೆ ಕ್ರೀಡಾ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಿತು.
ರೈಲ್ವೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಅವರ ಕುಟುಂಬವರ್ಗದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ತ್ರಿವರ್ಣ ಧ್ವಜವನ್ನು ಹಾರಿಸಿದರು. ಅವರು ಸಮಸ್ತ ರೈಲ್ವೆ ಕುಟುಂಬ, ಉದ್ಯಮದ ಪಾಲುದಾರರು, ವ್ಯಾಪಾರ ಸಹವರ್ತಿಗಳು ಮತ್ತು ರೈಲು ಗ್ರಾಹಕರಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.
ಈ ಮಹತ್ವದ ಸಂದರ್ಭದಲ್ಲಿ ಮಾತನಾಡಿದ ಶಿಲ್ಪಿ ಅಗರ್ವಾಲ್, ಮೈಸೂರು ವಿಭಾಗದ ಗಮನಾರ್ಹ ಸಾಧನೆಗಳನ್ನು ಹಂಚಿಕೊಂಡರು. ಗಮನಾರ್ಹವಾಗಿ ವಿಭಾಗವು ಡಿಸೆಂಬರ್ 2023 ರ ವೇಳೆಗೆ ಒಟ್ಟು ಆದಾಯದಲ್ಲಿ 1069.34 ಕೋಟಿ ರೂಪಾಯಿ ಸಂಪಾದಿಸಿದ್ದು, ಕಳೆದ ವರ್ಷ ಡಿಸೆಂಬರ್‌ವರೆಗಿನ ಆದಾಯವಾದ 886.24 ಕೋಟಿ ರೂಪಾಯಿಗೆ ಹೋಲಿಸಿದರೆ 20.66% ಹೆಚ್ಚಳವನ್ನು ಸಾಧಿಸಿದೆ. ಸರಕು ಸಾಗಾಣಿಕೆ ಆದಾಯವು ಶ್ಲಾಘನೀಯವಾದ ರೂ. 711.15 ಕೋಟಿಗಳಿಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 27.60% ರಷ್ಟು ಆರೋಗ್ಯಕರ ಬೆಳವಣಿಗೆಯನ್ನು ಸಾಧಿಸಿದೆ ಎಂದರು.
ಮೈಸೂರು ವಿಭಾಗವು ಈ ವರ್ಷದಲ್ಲಿ ಡಿಸೆಂಬರ್ ವರೆಗೆ 2405 ರೇಕ್ ಗಳೊಂದಿಗೆ 8.367 M.T (ದಶಲಕ್ಷ ಟನ್) ಅನ್ನು ಲೋಡ್ ಮಾಡಿದೆ. ಇದು ಹಿಂದಿನ ವರ್ಷ 2022 ರಲ್ಲಿನ 1996 ರೇಕ್‌ಗಳೊಂದಿಗೆ 6.525 MT ಲೋಡಿಂಗ್ ಗೆ ಹೋಲಿಸಿದರೆ +28.2% ಹೆಚ್ಚಳವನ್ನು ಸೂಚಿಸುತ್ತದೆ. ಡಿಸೆಂಬರ್ 2023 ರಲ್ಲಿ ವಿಭಾಗವು 319 ರೇಕ್‌ಗಳೊಂದಿಗೆ 1.125 ಮಿಲಿಯನ್ ಟನ್‌ಗಳಷ್ಟು (MT) ಅತ್ಯಧಿಕ ಮಾಸಿಕ ಲೋಡ್ ಗಾಗಿ ಹೊಸ ದಾಖಲೆಯನ್ನು ಸ್ಥಾಪಿಸಿತ್ತು ಎಂದು ತಿಳಿಸಿದರು.
ಕಾರ್ಯಾಚರಣೆಯ ಸುರಕ್ಷತೆಯು ಯಾವಾಗಲೂ ಪ್ರಮುಖ ಆದ್ಯತೆಯಾಗಿದ್ದೂ, ಇದು ವಿಭಾಗ ನಡೆಸಿದ ಸುರಕ್ಷತಾ ಜಾಥಾಗಳು, ನೈಜ ಜೀವನದ ಅಪಘಾತದ ಸನ್ನಿವೇಶವನ್ನು ಸೃಷ್ಟಿಸಿ ಮಾಡುವ ಅಣಕು ಕವಾಯತುಗಳು, ವಿಚಾರ ಸಂಕೀರ್ಣ ಕಾರ್ಯಕ್ರಮಗಳು ಮತ್ತು ವಿಭಾಗದಾದ್ಯಂತ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಜೊತೆಗೆ ನಡೆಸಿದ ತಪಾಸಣೆಗಳಂತಹ ಕಾರ್ಯಕ್ರಮಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಈ ವಿತ್ತೀಯ ವರ್ಷದಲ್ಲಿ ಸುಮಾರು 111 ಟ್ರ್ಯಾಕ್ ಕಿಮೀಗಳಿಗೆ ವಿಭಾಗದ ವೇಗವನ್ನು 100 ಕಿ.ಮೀ. ನಿಂದ 110 ಕಿ.ಮೀ. ಗೆ ಹೆಚ್ಚಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಬಿಸಿನೆಸ್ ಡೆವಲಪ್ ಮೆಂಟ್ ಯುನಿಟ್ (ವ್ಯಾಪಾರ ಅಭಿವೃಧಿ ಘಟಕ)ದ ಪ್ರಯತ್ನದಿಂದ ವಿಭಾಗವು ಹಾವೇರಿಯಿಂದ ಹೊಸ ಸರಕು “ಮೇವು” ಅನ್ನು ಲೋಡ್ ಮಾಡಿದೆ ಮತ್ತು ಹೊಸ ತಾಣವಾದ ಈಶಾನ್ಯ ಗಡಿ ರೈಲ್ವೆಯ ಲುಮ್ಡಿಂಗ್ ವಿಭಾಗದ ಭಂಗಾಗೆ ಹಾವೇರಿಯಿಂದ ಸಕ್ಕರೆಯನ್ನು ಲೋಡ್ ಮಾಡಿದೆ ಎಂದು ಅವರು ತಿಳಿಸಿದರು.
ಪ್ರಯಾಣಿಕರ ವಿಭಾಗದಲ್ಲಿ, ವಿಭಾಗವು ಡಿಸೆಂಬರ್ 2023 ರವರೆಗೆ 25.28 ದಶಲಕ್ಷ ಪ್ರಯಾಣಿಕರನ್ನು ಸಾಗಿಸಿದೆ. ವಿಭಾಗದ ಮೇಲ್/ಎಕ್ಸ್ ಪ್ರೆಸ್ ರೈಲುಗಳು ಸುಮಾರು 98% ಸಮಯಪಾಲನೆಯಲ್ಲಿ ಚಲಿಸುತ್ತಿದ್ದೂ, ಸಮಯಪಾಲನೆಯ ವಿಷಯದಲ್ಲಿ ನೈಋತ್ಯ ರೈಲ್ವೆಯಲ್ಲಿಯೇ ಅತ್ಯಂತ ಹೆಚ್ಚಿನದಾಗಿದೆ. ವಿಭಾಗವು ಸಿಬ್ಬಂದಿಗಳ ಸಂಘಟಿತ ಪ್ರಯತ್ನಗಳಿಂದಾಗಿ ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯ ಉಲ್ಬಣವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಿದೆ ಎಂದು ಅವರು ತಿಳಿಸಿದರು.
ಹೊಸ ಲಿಫ್ಟ್ ಗಳು, ಎರಡನೇ ಪ್ರವೇಶ ದ್ವಾರಗಳು ಮತ್ತು ವಿಸ್ತರಿಸಿದ ಪಾದಚಾರಿ ಮೇಲ್ಸೇತುವೆಗಳು ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿಯ ಕಾರ್ಯಗಳಿಂದಾಗಿ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವನ್ನು ಹೆಚ್ಚಿಸಿರುವ ಬಗ್ಗೆ ಅವರು ವಿಷೇಶವಾಗಿ ತಿಳಿಸಿದರು. ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಕಾರ್ಯಾಚರಣೆ ಸೌಲಭ್ಯಗಳೊಂದಿಗೆ ಮೈಸೂರು ನಿಲ್ದಾಣಕ್ಕೆ ಪರ್ಯಾಯ ಟರ್ಮಿನಲ್ ಆಗಿ ಕಾರ್ಯನಿರ್ವಹಿಸಲು ವಿಭಾಗವು ಅಶೋಕಪುರಂ ಯಾರ್ಡ್‌ನ ಮರುರೂಪಿಸುವಿಕೆಯನ್ನು ಪ್ರಾರಂಭಿಸಿತು. ಇದರ ಹೊರತಾಗಿ, ಕಡಕೊಳದಲ್ಲಿ M/s. ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, MMPL (GCCK) ರವರ ಒಂದು ‘ಗತಿ ಶಕ್ತಿ-ಮಲ್ಟಿ-ಮಾಡೆಲ್ ಕಾರ್ಗೋ ಟರ್ಮಿನಲ್’ ಅನ್ನು ಹೊಸದಾಗಿ ನಿಯೋಜಿಸಲಾಯಿತು ಮತ್ತು ಅಲ್ಲಿನ ಮೊದಲ ಸರಕು ರೇಕ್ ಅನ್ನು ನವೆಂಬರ್ 2023 ರಲ್ಲಿ ಸ್ವೀಕರಿಸಲಾಯಿತು. ಹಾಸನ ನಿಲ್ದಾಣದಲ್ಲಿ ಕಾರ್ಯಾಚರಣೆಯ ಕಾರ್ಯಸಾಧ್ಯತೆ ಹೆಚ್ಚಿಸಲು ಉನ್ನತ್ತೀಕರಿಸಿದ ಸಿಗ್ನಲಿಂಗ್ ವ್ಯವಸ್ಥೆಯೊಂದಿಗೆ ಪ್ರಮುಖ ಯಾರ್ಡ್ ಮರುನಿರ್ಮಾಣವನ್ನು ಮಾಡಲಾಯಿತು ಎಂದು ಹೇಳಿದರು.
ಉದ್ಯೋಗಿಗಳ ಕಲ್ಯಾಣ ಉಪಕ್ರಮಗಳಲ್ಲಿ ಬಡ್ತಿಗಳು, ಆರ್ಥಿಕ ಉನ್ನತೀಕರಣಗಳು ಮತ್ತು ತರಬೇತಿ ಕಾರ್ಯಕ್ರಮಗಳು ಸೇರಿವೆ. ಒಟ್ಟು 814 ಉದ್ಯೋಗಿಗಳು ಬಡ್ತಿಗಳನ್ನು ಪಡೆದರು, 46 ಮಂದಿ ಆರ್ಥಿಕ ಉನ್ನತೀಕರಣವನ್ನು ಪಡೆದರು ಮತ್ತು 986 ಹೊಸ ನೇಮಕಾತಿಗಳನ್ನು RRB, RRC ಮತ್ತು CGA ನೇಮಕಾತಿಗಳ ಮೂಲಕ ಮಾಡಲಾಗಿದೆ.
ವಿಭಾಗದ ಪರಿಸರ ಮತ್ತು ಸಾಮಾಜಿಕ ಜವಾಬ್ದಾರಿಯುತ ಉಪಕ್ರಮಗಳಲ್ಲಿ 12 ನಿಲ್ದಾಣಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಕಾರ್ಯಾಚರಣೆಗೆ ಸಮ್ಮತಿ (Consent For Operation – CFO) ಪಡೆಯುವುದನ್ನು ಒಳಗೊಂಡಿವೆ. 89 ರೈಲು ನಿಲ್ದಾಣಗಳಲ್ಲಿ ‘ಸ್ವಚ್ಛತಾ ಪಾಕ್ಷಿಕ’ ಚಟುವಟಿಕೆಗಳನ್ನು ನಡೆಸಲಾಗಿದ್ದು, ಸುಮಾರು 3000 ಉದ್ಯೋಗಿಗಳು ಇದರಲ್ಲಿ ಭಾಗವಹಿಸಿದ್ದಾರೆ. ಪ್ರಯಾಣಿಕರ ಜೊತೆ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧ ಮತ್ತು ನೀರಿನ ಸಂರಕ್ಷಣೆ ಕುರಿತು ಜಾಗೃತಿ ಆಂದೋಲನ ನಡೆಸಲಾಯಿತು.
ರೈಲು ಭದ್ರತಾ ವ್ಯವಸ್ಥೆಯ ನೇರ ಉಸ್ತುವಾರಿ (Live Monitoring) ಅನ್ನು ಮೈಸೂರು ವಿಭಾಗದಲ್ಲಿ ಪರಿಚಯಿಸಲಾಗಿದೆ. ಅಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲು RPF ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ರೂ.27.09 ಲಕ್ಷಗಳ (ಅಂದಾಜು.) ದಂಡವನ್ನು ಅನಧಿಕೃತ ಟಿಕೇಟ್ ಹಸ್ತಾಂತರ ಮತ್ತು ಇತರ ಪ್ರಕರಣಗಳಿಂದ ವಸೂಲಿ ಮಾಡಲಾಗಿದೆ. 45 ಹುಡುಗರು ಮತ್ತು 6 ಹುಡುಗಿಯರನ್ನು ರೈಲ್ವೆ ಸುರಕ್ಷತಾ ಸಿಬ್ಬಂದಿ ರಕ್ಷಿಸಿದ್ದಾರೆ ಮತ್ತು ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಿ ಸಂಬಂದಪಟ್ಟ ಸಂಸ್ಥೆಗಳಿಗೆ/ಎನ್ ಜಿಒ/ಪೋಷಕರಿಗೆ ಹಸ್ತಾಂತರಿಸಿದ್ದಾರೆ ಎಂದರು.