ಹೈದರಾಬಾದ್(Hydarabad): ಇಲ್ಲಿನ ಎಲೆಕ್ಟ್ರಿಕ್ ಬೈಕ್ ಶೋ ರೂಂ ಒಂದರಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಂದು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ನಗರದ ಗಾಂಧಿ ಮತ್ತು ಯಶೋಧಾ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಶೋ ರೂಂ ಮೇಲಿನ ಮಹಡಿಯಲ್ಲಿರುವ ಲಾಡ್ಜ್ಗೂ ಬೆಂಕಿ ವ್ಯಾಪಿಸಿದೆ. ಹಲವು ಎಲೆಕ್ಟ್ರಿಕ್ ಸ್ಕೂಟರ್ಗಳು ಸುಟ್ಟು ಹೋಗಿವೆ.
ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದು, ದುರಂತಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಕಟ್ಟಡದ ನೆಲ ಮಹಡಿಯಲ್ಲಿರುವ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ಮೇಲಿನ ಮಹಡಿಯಲ್ಲಿರುವ ರೂಬಿ ಲಾಡ್ಜ್ನಲ್ಲಿ ದಟ್ಟ ಹೊಗೆ ಆವರಿಸಿದೆ.
ಅಗ್ನಿ ಶಾಮಕ ಸಿಬ್ಬಂದಿ 9 ಜನರನ್ನು ರಕ್ಷಿಸಿದ್ದಾರೆ. ಲಾಡ್ಜ್ನಲ್ಲಿದ್ದವರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಕಿಟಕಿಗಳ ಮೂಲಕ ಹೊರಗೆ ಜಿಗಿದಿದ್ದಾರೆ ಎಂದು ವರದಿಯಾಗಿದೆ.
ರಾಜ್ಯ ಪಶುಸಂಗೋಪನೆ ಸಚಿವ ಟಿ. ಶ್ರೀನಿವಾಸ ಯಾದವ್ ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.















