ಬೆಂಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಹಂಚಿಕೆಯಲ್ಲಿ 800 ಕೋಟಿ ರೂ. ಹಗರಣ ನಡೆಸಲಾಗಿದೆ ಎಂದು ಮಾಜಿ ಕಾರ್ಪೊರೇಟರ್ ಎನ್ ಆರ್ ರಮೇಶ್ ಆರೋಪ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ, ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಮತ್ತು ಮೆಡಿಕಲ್ ಕಾಲೇಜಿನ ಮುಖ್ಯಸ್ಥ ರಾಧಾಕೃಷ್ಣ ದೊಡ್ಡಮನಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದ್ದು, ಈ ಕುರಿತಾಗಿ ಎನ್ಆರ್ ರಮೇಶ್ 900 ಪುಟಗಳ ದಾಖಲೆ ಬಿಡುಗಡೆ ಮಾಡಿದ್ದಾರೆ.
ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ಸಚಿವ ಮಹದೇವ್ ಪ್ರಸಾದ್, ಡಾ.ಟಿ.ಮುರಳಿ ಮೋಹನ್, ಕುಬೇರ್ ಅಮಾನುಲ್ಲಾ ಖಾನ್ ವಿರುದ್ಧ N.R.ರಮೇಶ್ ದೂರು ದಾಖಲಿಸಿದ್ದಾರೆ.
ರಾಧಾಕೃಷ್ಣ ದೊಡ್ಡಮನಿ ಆಪ್ತ, ಡಿ ದರ್ಜೆ ನೌಕರ ಅಮಾನುಲ್ಲಾ ಖಾನ್ ಪಿಯು ಫೇಲಾದ ವಿದ್ಯಾರ್ಥಿಗಳಿಗೂ ಸೀಟು ಮಾರಿಕೊಂಡ ಆರೋಪ ಮಾಡಲಾಗಿದೆ. ಈವರೆಗೆ 6 ವಿದ್ಯಾರ್ಥಿಗಳಿಗೆ ಕಾಲೇಜು ಅಕ್ರಮವಾಗಿ ಸೀಟ್ ನೀಡಿದೆ. ರಾಜ್ಯ ಹಾಗೂ ದೇಶದ ವಿವಿಧೆಡೆ ಶ್ರೀಮಂತ ಮಕ್ಕಳನ್ನು ಹುಡುಕಿ ತಂದು ಅಕ್ರಮವಾಗಿ ಹಣ ಪಡೆದು MBBS ಹಾಗೂ BDS ಸೀಟ್ ಕೊಡಿಸುತ್ತಿದ್ದಾರೆಂದು ಅಮಾನುಲ್ಲಾ ವಿರುದ್ಧ ಆರೋಪಿಸಲಾಗಿದೆ. ಹೀಗಾಗಿ ಕಾಲೇಜು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ N.R.ರಮೇಶ್ ಆಗ್ರಹಿಸಿದ್ದು, ಈಗಾಗಲೇ ಲೋಕಾಯುಕ್ತ, ಸಿಐಡಿಗೆ ದೂರು ನೀಡಲಾಗಿದೆ.
1980-81 ರಲ್ಲಿ ಆನಂದ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಿ ಸಂಸ್ಥೆ (ರಿ) ಹೆಸರಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯವು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಸಿಎಂ ಆರ್. ಗುಂಡೂರಾವ್, ಅಂದಿನ ಕೇಂದ್ರ ಸಚಿವರಾಗಿದ್ದ. ವಿ. ಶಂಕರಾನಂದ, ರಾಜ್ಯದ ಸಚಿವರಾಗಿದ್ದ ವಿ. ಬಸವಲಿಂಗಪ್ಪ, ಬಿ. ರಾಚಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸಹಕಾರದಿಂದ ಪ್ರಾರಂಭಿಸಲಾಗಿದೆ. ಪ್ರಸ್ತುತ ಆನಂದ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಿ ಸಂಸ್ಥೆ (ರಿ) ನ ಅಡಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜ್, ಮಾತೃಶ್ರೀ ರಮಾಬಾಯಿ ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜು, ಮಾತೃಶ್ರೀ ರಮಾಬಾಯಿ ನರ್ಸಿಂಗ್ ಕಾಲೇಜು ಸೇರಿದಂತೆ ಹಲವಾರು ಉನ್ನತ ಶೈಕ್ಷಣಿಕ ವಿದ್ಯಾ ಸಂಸ್ಥೆಗಳು ಬೆಂಗಳೂರು ಮಹಾನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಬಡ ವಿದ್ಯಾರ್ಥಿಗಳು ಸೇರಿದಂತೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಚದಲ್ಲಿ ಅತ್ಯುನ್ನತ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಒದಗಿಸುವ ಸದುದ್ದೇಶದಿಂದ ಸದರಿ ಸಂಸ್ಥೆಗಳು ಪ್ರಾರಂಭಿಸಲಾಗಿದೆ.
ಪ್ರಾರಂಭದಲ್ಲಿ ಸದರಿ ಆನಂದ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಿ ಸಂಸ್ಥೆಯೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಮಾಜಿ ಕೇಂದ್ರದ ಸಚಿವರು ಹಾಗೂ ಪ್ರಸ್ತುತ AICC ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ರವರ ಅಳಿಯ ರಾಧಾಕೃಷ್ಣ ದೊಡ್ಡಮನಿ, ದಿವಂಗತ ಹೆಚ್. ಎಸ್. ಶಿವಸ್ವಾಮಿ ಯವರ ಮಗ ಹೆಚ್. ಎಸ್ ಮಹದೇವ ಪ್ರಸಾದ್ ರವರು ಮತ್ತು ದಿವಂಗತ ಡಾ. ಎನ್. ಟಿ. ಮೋಹನ್ ರವರ ಮಗ ಡಾ. ಎನ್. ಟಿ. ಮುರಳಿ ಮೋಹನ್ ರವರು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸದರಿ ಡಾ. ಬಿ. ಆರ್. ಅಂಬೇಡ್ಕರ್ ವೈದ್ಯಕೀಯ ಮಹಾವಿದ್ಯಾಲಯದ ಧರ್ಮದರ್ಶಿಗಳಾಗಿ ತಮ್ಮ ತಮ್ಮ ಪ್ರಭಾವಗಳನ್ನು ಬಳಸಿ ಅಧಿಕಾರ ವಹಿಸಿಕೊಂಡ ನಂತರ ಡಾ. ಬಿ. ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಡಾ. ಎಂ. ಆರ್. ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಪ್ರತೀ ವರ್ಷ ನೂರಾರು ಕೋಟಿ ರೂ. ಅಕ್ರಮಗಳು ಯಾವುದೇ ಎಗ್ಗಿಲ್ಲದೇ ನಡೆಯುತ್ತಿವೆ ಎಂದು ಎನ್ ಆರ್ ರಮೇಶ್ ಆರೋಪಿಸಿದ್ದಾರೆ.