ಮನೆ ರಾಜ್ಯ 8,050 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ

8,050 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ

0

ಬೆಂಗಳೂರು: ರಾಜ್ಯ ಬಜೆಟ್‌ ನಲ್ಲಿ ಮೂಲಸೌಕರ್ಯ ಯೋಜನೆಗಳು ಮತ್ತು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು 8,050 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮತ್ತು ನಡೆಯುತ್ತಿರುವ ಕಾಮಗಾರಿಗಳಿಗೆ ಸುಮಾರು 3,000 ಕೋಟಿ ರೂ. ಬೇಕಾಗಿದೆ. ಇನ್ನು ಗುತ್ತಿಗೆದಾರರಿಗೆ ಬಿಬಿಎಂಪಿ ನೀಡಬೇಕಿರುವ ಒಟ್ಟು ಬಾಕಿ ಮೊತ್ತ 2,700 ಕೋಟಿ ರೂಪಾಯಿ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 200 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗೆ 600 ಕೋಟಿ ರೂ., ಮಳೆ ನೀರು ಚರಂಡಿಗಳ ಅಭಿವೃದ್ಧಿಗೆ 200 ಕೋಟಿ ರೂ. ಅಗತ್ಯವಿದೆ ಎಂದು ಬಿಬಿಎಂಪಿ ಸರ್ಕಾರಕ್ಕೆ ತಿಳಿಸಿದೆ.

ಉಳಿದ ಹಣವನ್ನು ಹೊಸ ಯೋಜನೆಗಳ ಅನುಷ್ಠಾನಕ್ಕೆ ಬಳಸಲಾಗುವುದು. ಮೂಲಗಳ ಪ್ರಕಾರ, ಬಿಬಿಎಂಪಿ ಕಳೆದ ವರ್ಷ ಸುಮಾರು 9,000 ಕೋಟಿ ಅನುದಾನವನ್ನು ಕೋರಿತ್ತು ಮತ್ತು ಸರ್ಕಾರ ಕೇವಲ 3,732 ಕೋಟಿ ರೂ. ನೀಡಿತ್ತು.

ಈ ಬಾರಿ ನಗರದ ಮೊದಲ ಸುರಂಗ ಮಾರ್ಗ ಯೋಜನೆ ಮತ್ತು ಸ್ಕೈ ಡೆಕ್ ಯೋಜನೆ ಆರಂಭಿಸಲು ಸರ್ಕಾರ ಉತ್ಸುಕವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಅಧಿಕಾರಿಗಳು ತಾವು ಕೇಳಿದ ಹಣವನ್ನು ಸರ್ಕಾರ ಮಂಜೂರು ಮಾಡುವ ನಿರೀಕ್ಷೆಯಲ್ಲಿದ್ದಾರೆ.