ಮೈಸೂರು: ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಆಡಳಿತ ಹಾಗೂ ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಕುಳುವ ಮಹಾಸಂಘದ ವತಿಯಿಂದ ಶರಣ ಶ್ರೀ ನುಲಿಯ ಚಂದಯ್ಯರವರ 917ನೇ ಜಯಂತೋತ್ಸವ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಮಾತನಾಡಿ, ಶರಣ ನುಲಿಯ ಚಂದಯ್ಯರವರ ಆಶಿರ್ವಾದದಿಂದ ನಾವೆಲ್ಲರೂ ಇಂದು ಒಂದಾಗಿ ಸೇರೆ ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಬೆಳೆಯುವಂತೆ ಕರೆ ನೀಡಿದರು.
ರಾಜಕೀಯ ಎಂಬುದು ಬಹಳ ದೊಡ್ಡಶಕ್ತಿ. ಸಂವಿಧಾನದ ಮೂಲಕ ನಾಯಕರನ್ನು ಆಯ್ಜೆ ಮಾಡುವ ಹಕ್ಕನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ್ದಾರೆ. ಅಲೆಮಾರಿ ಸಮುದಾಯಗಳಿಗೆ ಇಲ್ಲಿಯವರೆಗೆ ಬೆರಳಣಿಕೆಯಷ್ಟೂ ಮಾತ್ರ ರಾಜಕೀಯ ಪ್ರಾತಿನಿಧ್ಯ ನಿಡಲಾಗಿದೆ. ದಿವಂಗತ ಡಿ.ದೇವರಾಜು ಅರಸು ಅವರ ನಂತರ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿರುವವರು ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಶ್ಲಾಘಿಸಿದರು.
ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಬದ್ದವಾಗಿದೆ.ಆದರೆ ಮುಖ್ಯವಾಹಿನಿಗೆ ಬರಲು ನಾವೆಲ್ಲರೂ ಒಟ್ಟಾಗಬೇಕು. ಸರ್ಕಾರಿ ಸಾಲ-ಸೌಲಭ್ಯಗಳ ಮಾಹಿತಿ ಪಡೆದು ಸ್ವಾವಲಂಬನೇ ಸಾಧಿಸುವಷ್ಟು ಶಿಕ್ಷಣ ಜ್ಞಾನ ಪಡೆದುಕೊಳ್ಳಬೇಕು. ಹಾಗೆಯೇ ಅಲೆಮಾರಿ ಸಮುದಾಯಗಳ ಪರವಾಗಿ ಪ್ರಾಮಾಣಿಕ ಸೇವೆಯನ್ನು ಮಾಡುವ ಮೂಲಕ ಶ್ರಮಿಸುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯಗಳಿಗೆ ನೆಲೆ ಇಲ್ಲ. ನೆಲೆ ಇಲ್ಲದ ಅಲೆಮಾರಿ ಸಮುದಾಯಗಳಿಗೆ ನೀವೇಶನ ಕೊಡುವ ನಿಟ್ಟಿನಲ್ಲಿ ಆಡಳಿತ ಸಿಬ್ಬಂದಿ ಕೆಲಸ ಮಾಡಬೇಕು.
ಸರ್ಕಾರಿ ಜಾಗ ಇಲ್ಲದಿದ್ದರೂ ಖಾಸಗಿ ಜಾಗ ಖರೀದಿಸಿ ಕೊಡಲು ಅವಕಾಶ ಇದೆ. ನಿಗಮದಿಂದ ಮನೆಕಟ್ಟಲು 2 ಲಕ್ಷ ರೂ.ಅನುದಾನ ನೀಡಲಾಗುವುದು. ಹತ್ತಾರು ಸಾಲ-ಸೌಲಭ್ಯಗಳಿವೆ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಶರಣ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ಕಳೆದ ಮೂರು ವರ್ಷಗಳಿಂದ ಶರಣ ನುಲಿಯ ಚಂದಯ್ಯ ಅವರ ಜಯಂತಿಯನ್ನು ಅರ್ಥಪೂರ್ಣ ಆಚರಣೆ ಮಾಡಲಾಗುತ್ತಿದೆ. ಒಗ್ಗೂಡಿದರೆ ಮಾತ್ರ ಸಮುದಾಯಕ್ಕೆ ಶಕ್ತಿ ಬರಲು ಸಾಧ್ಯ. ಮುಂದಿನ ದಿನಗಳಲ್ಲಿ ಅಲೆಮಾರಿ ಕೊರಮ ಸಮುದಾಯದವರಿಗೆ ಎಲ್ಲಾ ಕ್ಷೇತ್ರದಲ್ಲೂ ಅದರಲ್ಲೂ ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ ದೊರೆಯಲಿ ಎಂದು ಹಾರೈಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟರೇ ಬೇರೆ ಯಾವ ಮುಖ್ಯಮಂತ್ರಿ ಕೂಡ ಹಾಡಿಗಳಿಗೆ ಹೊಗಿಲ್ಲ. ಸಣ್ಣ ಸಮುದಾಯಗಳನ್ನು ಮೇಲೆತ್ತುವ ನಿಟ್ಟಿನಲ್ಲಿ
ಎಸ್ ಸಿ, ಎಸ್ ಟಿ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸುವ ಮುಲಕ ಆರ್ಥಿಕ ಸ್ವಾವಲಂಬನೆಗೆ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ ಪ್ರಾಸ್ತಾವಿಕವಾಗಿ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಅಭೂತಪೂರ್ವವಾಗಿ ಈ ವರ್ಷ ಜಯಂತಿ ಆಚರಣೆ ಮಾಡಿದ್ದೇವೆ. ಸಂಘಟನೆ ವಿಚಾರದಲ್ಲಿದ್ದ ಎಲ್ಲಾ ಅಡೆ-ತಡೆಗಳು ನುಲಿಯ ಚಂದಯ್ಯರ ಜಯಂತಿಯಿಂದಾಗಿ ನಿವಾರಣೆಯಾಗಿದೆ. ಶರಣರು ನುಡಿದಂತೆ ನಡೆದವರು.
ಭಗವಾನ್ ಬುದ್ದ ಬಿಟ್ಟರೆ ಶರಣರು ಮಾತ್ರ ನುಡಿದಂತೆ ನಡೆದವರು.
ವಚನಗಳ ಸಾಹಿತ್ಯ ಚಳುವಳಿ ಕೇವಲ ಕಾಯಕವನ್ನು ಮಾಡಿ ಜೀವನ ನಡೆಸುವವರ ಚಳುವಳಿಯಾಗಿದೆ. ಮೈಸೂರು ಜಿಲ್ಲೆ ಮೊದಲ ಬಾರೀ ಮೀಸಲಾತಿ ಪಡೆದ ಜಿಲ್ಲೆ. ಇಡೀ ರಾಜ್ಯದಲ್ಲಿ ಲೆಕ್ಕಾಚಾರ ಮಾಡಿದರೆ ಸುಬಿಕ್ಷರಾಗಿರುವುದು ಮೈಸೂರಿನಲ್ಲಿ. ಮೈಸೂರು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಸಂಘಟಿತರಾದರೆ ಉನ್ನತ ಸ್ಥಾನಮಾನಗಳನ್ನು ಪಡೆಯಬಹುದು ಎಂದರು.
ಎಲ್ಲಾ ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಹಾಗೂ ಮೈಸೂರು ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಕೊರಮ, ಕೊರಚ ಸಮುದಾಯದವರಿದ್ದೇವೆ. ಇಷ್ಟು ಸಂಖ್ಯೆಯಲ್ಲಿರುವ ಸಮುದಾಯದ ಸ್ವಾವಲಂಬನೆಗಾಗಿ ಮಾಜಿ ಶಾಶಕರಾದ ದಿವಂಗತ ಸುಸೀಲಮ್ಮ ಚೆಲುವರಾಜ್ ಅವರ ಸ್ಮರಣಾರ್ಥ ಸಮುದಾಯ ಭವನದ ಅಗತ್ಯವಿದ್ದು, ತಿಂಗಳೊಳಗೆ ಕನಿಷ್ಟ 2 ಎಕರೆ ಜಾಗ ಗುರ್ತಿಸಿ ನೀಡಬೇಕು ಎಂದು ಮನವಿ ಮಾಡಿದರು.
ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕು ಸಂಘದ ಅಧ್ಯಕ್ಷ ಟಿ.ಪುರುಷೋತ್ತಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹೆಚ್.ಡಿ.ಕೋಟೆ ತಹಶೀಲ್ದಾರ್ ಶ್ರೀನಿವಾಸ್, ಆರಕ್ಷಕ ನಿರೀಕ್ಷಕ ಬಿ.ಜಿ.ಕುಮಾರ್, ಪುರಸಭೆ ಆಡಳಿತಾಧಿಕಾರಿ ಮುತ್ತುರಾಜ್, ಪ್ರಧಾನ ಕಾರ್ಯದರ್ಶಿ ಬಿಎಸ್.ಆನಂದ್ ಕುಮಾರ್ ಏಕಲವ್ಯ, ಮೈಸೂರು ಜಿಲ್ಲಾ ಕುಳುವ ಮಹಾಸಂಘದ ಅಧ್ಯಕ್ಷ ಡಿ.ಎನ್.ಮುತ್ತುರಾಜ್, ಕಾರ್ಯಾಧ್ಯಕ್ಷ ಉಪಾಧ್ಯಕ್ಷರಾದ ಪುಟ್ಟಸ್ವಾಮಿ, ಶಿವರಾಜು, ಮಹೇಂದ್ರ, ಸಿ.ರಾಜು, ಪ್ರಧಾನ ಕಾರ್ಯದರ್ಶಿ ಮೋಹನ್ ಕಾಯಕ, ಜಂಟಿ ಕಾರ್ಯದರ್ಶಿ ಮೋಹನ್ ಕಾಯಕ, ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣಪ್ಪ, ರಂಗಸಮುದ್ರ ಸೋಮಣ್ಣ, ಹಾರೊಹಳ್ಳಿ ರಾಮಕೃಷ್ಞ, ತಾಲ್ಲೂಕು ಕುಳುವ ಮಹಾಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.














