ಮನೆ ಸ್ಥಳೀಯ ಯಳಂದೂರು ತಾಲೂಕಿನಲ್ಲಿ ಶೇ. ೯೫ರಷ್ಟು ಜಾತಿಗಣತಿ : ರಾಚಯ್ಯ

ಯಳಂದೂರು ತಾಲೂಕಿನಲ್ಲಿ ಶೇ. ೯೫ರಷ್ಟು ಜಾತಿಗಣತಿ : ರಾಚಯ್ಯ

0

ಯಳಂದೂರು: ರಾಜ್ಯಾದ್ಯಂತ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಗಣತಿ ಹಮ್ಮಿಕೊಂಡಿದ್ದು ಈ ಗಣತಿ ಪ್ರತಿ ಕಡೆಯೂ ನಡೆಯುತ್ತಿದ್ದು ನಮ್ಮ ಜಿಲ್ಲೆಯಲ್ಲಿ ಈ ಕೆಲಸ ಪ್ರಗತಿಯಲ್ಲಿದ್ದು ಯಳಂದೂರು ತಾಲೂಕಿನಲ್ಲಿ ಈಗಾಗಲೇ ಶೇ. ೯೫ ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಕಿನಕಹಳ್ಳಿ ರಾಚಯ್ಯ ಮಾಹಿತಿ ನೀಡಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಜಾತಿಗಣತಿಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ ಈಗಾಗಲೇ ಪರಿಶಿಷ್ಟ ಜಾತಿಯಲ್ಲಿ ಬರುವ ಬಲಗೈ ಆದಿ ಕರ್ನಾಟಕ ಜನಾಂಗದವರು ಕಡ್ಡಾಯವಾಗಿ ತಮ್ಮ ಜಾತಿಯನ್ನು ಹೊಲಯ ಎಂತಲೇ ನಮೂದಿಸಬೇಕು ಎಂದು ಜಾಗೃತಿಯನ್ನು ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯರು ತಾಲೂಕಿನ ಪ್ರತಿ ಗ್ರಾಮಗಳಿಗೂ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಂಸದ ಸುನೀಲ್ ಬೋಸ್ ಹಾಗೂ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿರವರು ಈ ಬಗ್ಗೆ ಹಲವು ಸಭೆಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ಇವರ ಮಾರ್ಗದರ್ಶನದಂತೆ ಸಮಿತಿ ಸದಸ್ಯರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಈಗ ಮೇ. ೨೯ ರವರೆಗೂ ಈ ಅವಧಿಯನ್ನು ವಿಸ್ತರಿಸಲಾಗಿದೆ. ಅಲ್ಲಿ ತನಕ ನಮ್ಮ ತಾಲೂಕು ಹಾಗೂ ಜಿಲ್ಲೆಯಲ್ಲಿ ಶೇ. ೧೦೦ ರಷ್ಟು ಪ್ರಗತಿ ಸಾಧಿಸಲು ಶ್ರಮಪಡಲಾಗುವುದು ಎಂದು ಮಾಹಿತಿ ನೀಡಿದರು.

ಜಿಪಂ ಮಾಜಿ ಸದಸ್ಯ ವಡಗೆರೆ ದಾಸ್ ಮಾತನಾಡಿ, ಜಾತಿ ಗಣತಿಯ ಮೂಲಕ ಪರಿಶಿಷ್ಟರಿಗೆ ಒಳಮೀಸಲಾತಿ ನಿಗಧಿ ಮಾಡಲು ರಾಜ್ಯ ಸರ್ಕಾರ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ನಮ್ಮ ತಾಲೂಕಿನಲ್ಲಿ ಒಟ್ಟು ೫೯೫೬ ಪರಿಶಿಷ್ಟ ಕುಟುಂಬಗಳಿವೆ. ಇದರಲ್ಲಿ ಈಗಾಗಲೇ ೫೬೮೩ ಕುಟುಂಬಗಳ ಜಾತಿ ಸಮೀಕ್ಷೆ ಮಾಡಲಾಗಿದೆ. ಇನ್ನುಳಿದ ೨೭೩ ಕುಟುಂಬಗಳು ಬಾಕಿ ಇವೆ. ಇವರಿಗೆ ಕೆಲವರಿಗೆ ತಾಂತ್ರಿಕ ದೋಷದಿಂದ ಪಡಿತರ ಪಟ್ಟಿ, ಆಧಾರ್ ಕಾರ್ಡ್‌ನಲ್ಲಿ ಬೇರೆಬೇರೆ ಜಾತಿ ನಮೂದಾಗಿರುವುದು, ಕೆಲವರು ಪರ ಊರಿನಲ್ಲಿ ಉದ್ಯೋಗ ಅರಸಿ ಹೋಗಿರುವುದು, ಕೆಲವರಿಗೆ ಪರಿಶಿಷ್ಟ ಪಂಗಡ ಎಂದು ನಮೂದಾಗಿದೆ. ಅಂಬೇಡ್ಕರ್ ಸೇವಾ ಸಮಿತಿಯ ಸದಸ್ಯರು ಇದಕ್ಕೆ ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿಗಳು ಹಾಗೂ ಸಿಬ್ಬಂಧಿಯೊಂದಿಗೆ ಚರ್ಚಿಸಿ ಈ ತಾಂತ್ರಿಕ ತೊಂದರೆ ನಿವಾರಣೆಗೆ ಕ್ರಮ ವಹಿಸಿದ್ದಾರೆ. ಅಲ್ಲದೆ ಪರ ಊರಿನಲ್ಲಿರುವ ಈ ಸಮುದಾಯದ ಜನರನ್ನು ಇದಕ್ಕೆ ನೋಂದಣಿ ಮಾಡಿಸಲು ಕ್ರಮ ಮನವೊಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸೇವಾ ಸಮಿತಿಯ ಕೆಸ್ತೂರು ಸಿದ್ದರಾಜು ಮಾತನಾಡಿ, ಜಾತಿ ಗಣತಿಯಿಂದ ನಮಗೆ ಆಗುವ ಲಾಭಗಳೇನು, ಇದರಿಂದ ಸರ್ಕಾರದಿಂದ ನಮಗೆ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಇದು ಎಷ್ಟು ಅಗತ್ಯವಾಗಿದೆ. ಇದರಿಂದ ಯಾವ ರೀತಿಯ ಅನುಕೂಲವಾಗಲಿದೆ ಎಂಬುದರ ಬಗ್ಗೆ ಪ್ರತಿ ಮನೆಮನೆಗಳಿಗೂ ತೆರಳಿ ನಾವು ಜಾಗೃತಿಯನ್ನು ಮೂಡಿಸುತ್ತಿದ್ದೇವೆ. ಅಲ್ಲದೆ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಬಲಗೈ ಸಮುದಾಯ ಹೊಲಯ ಎಂದೇ ನಮೂದಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ನಮ್ಮ ತಂಡದ ಎಲ್ಲಾ ಸದಸ್ಯರೂ ಮೇ. ೨೯ ರವರೆಗೂ ಎಲ್ಲಾ ಗ್ರಾಮಗಳಿಗೂ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ. ಅಲ್ಲದೆ ಆಟೋಗಳಲ್ಲಿ ಮೈಕ್‌ಗಳ ಮೂಲಕವೂ ಜಾತಿ ಗಣತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಯರಿಯೂರು ಸಿ. ರಾಜಣ್ಣ, ದುಗ್ಗಹಟ್ಟಿ ಮಾದೇಶ್, ಮದ್ದೂರು ಉಮಾಶಂಕರ್, ವೈ.ಕೆ. ಮೋಳೆ ನಂಜುಂಡ, ಯರಿಯೂರು ಎನ್. ನಾಗೇಂದ್ರ, ಗುಂಬಳ್ಳಿ ಮಹಾದೇವ, ಜಯರಾಮ್, ವಜ್ರಮುನಿ, ಉಮೇಶ್ ಸೇರಿದಂತೆ ಅನೇಕರು ಇದ್ದರು.