ಮೈಸೂರು: ಏಕಕಾಲದಲ್ಲಿ ಕಳೆದ 20 ವರ್ಷಗಳಿಂದ ಮೈಸೂರು ಮಹಾನಗರ ಪಾಲಿಕೆ ಹಾಗೂ ಮುಡಾ ಕಚೇರಿಗಳಲ್ಲಿ ಪಾಳಯದ ಮೇಲೆ ಕೆಲಸ ಮಾಡಿ ಎರಡೂ ಕಡೆ ವೇತನ ಪಡೆಯುತ್ತಿದ್ದ ಬಿ.ಕೆ.ಕುಮಾರ್ ನನ್ನು ಮೈಸೂರು ಮಹಾನಗರ ಪಾಲಿಕೆ ಆಶಾದ್ ಉರ್ ರೆಹಮಾನ್ ಷರೀಫ್ ಅವರು ಸೇವೆಯಿಂದ ವಜಾಗೊಳಿಸಿದ್ದು, ಆತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದ್ದಾರೆ.
ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಮಲಿನ ನೀರು ಶುದ್ದೀಕರಣ ಘಟಕದಲ್ಲಿ ದ್ವಿತೀಯ ದರ್ಜೆ ಸಹಾಯಕ (ಸಮಾನ ಕೆಲಸಕ್ಕೆ ಸಮಾನ ವೇತನ) ನಾಗಿ ಕೆಲಸ ಮಾಡುತ್ತಿದ್ದ ಬಿ.ಕೆ.ಕುಮಾರ್, ಇದೇ ವೇಳೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಹೊರ ಗುತ್ತಿಗೆ ನೌಕರನಾಗಿ ಎರಡೂ ವೇತನ ಪಡೆದು ಕಾನೂನು ಉಲ್ಲಂಘನೆ ಮಾಡಿರುವುದರಿಂದ ಆತನನ್ನು ಕೆಲಸದಿಂದ ವಜಾ ಮಾಡಿರುವ ಪಾಲಿಕೆ ಆಯುಕ್ತರು, ಆತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು 2024ರ ನವೆಂಬರ್ 6 ರಂದು ಹೊರಡಿಸಿರುವ ಅಧಿಕೃತ ಜ್ಞಾಪನದಲ್ಲಿ ತಿಳಿಸಿದ್ದಾರೆ.
ಮೂಲತಃ ಪಾಂಡವಪುರ ತಾಲ್ಲೂಕು ಬೇವಿನಕುಪ್ಪೆ ಗ್ರಾಮದವನಾದ ಬಿ.ಕೆ.ಕುಮಾರ್, ಕಳೆದ 2004 ರಲ್ಲಿ ತುಂಡು ಕೆಲಸಗಳ (ಪೀಸ್ ವರ್ಕ್) ಆಧಾರದ ಮೇಲೆ ಅಂದು ಕೆಲಸ ನಿರ್ವಹಿಸುತ್ತಿದ್ದ ಕೆಲ ನೌಕರರು ನಿವೃತ್ತಿ ಅಥವಾ ಕೆಲಸ ತ್ಯಜಿಸಿದ್ದರಿಂದ ಖಾಲಿಯಾದ ಹುದ್ದೆಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನದಡಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಸೇವೆಗೆ ಸೇರಿಕೊಂಡಿದ್ದ ಅದೇ ವೇಳೆ ಕೆಲ ರಾಜಕಾರಣಿಗಳು. ಪ್ರಭಾವಿಗಳು ಹಾಗೂ ಆಪ್ತ ಅಧಿಕಾರಿಗಳ ಕೃಪಾಕಟಾಕ್ಷದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲೂ, ದ್ವಿತೀಯ ದರ್ಜೆ ಸಹಾಯಕನಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಆತ ಏಕ ಕಾಲದಲ್ಲಿ ಎರಡೂ ಕಡೆ ಸಂಬಳ ಪಡೆಯುತ್ತಿದ್ದ ಎಂಬ ದೂರುಗಳ ಹಿನ್ನಲೆಯಲ್ಲಿ ರಚಿಸಿದ್ದ ಸಮಿತಿಯು ಆತ ಏಕ ಕಾಲದಲ್ಲಿ ಎರಡೂ ಕಡೆ ಕೆಲಸ ಮಾಡಿ ಪ್ರತಿ ತಿಂಗಳು ಎರಡು ಕಡೆ ಸಂಬಳ ಪಡೆಯುತ್ತಿದ್ದ ಎಂದು 2024 ಅಕ್ಟೋಬರ್ 22 ರಂದು ವರದಿ ನೀಡಿತ್ತು. ಈ ರೀತಿ ಒಬ್ಬ ವ್ಯಕ್ತಿ ಎರಡು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವುದು ಕಾರ್ಮಿಕ ಕಾಯ್ದೆ ಅನ್ವಯ ನಿಯಮಬಾಹಿರ ಎಂದು ಅಭಿಪ್ರಾಯಪಟ್ಟ ಕಾರಣ ಪಾಲಿಕೆ ಆಯುಕ್ತರು ಕುಮಾರ್ ನನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.