ಬೆಂಗಳೂರು: ಬಿಜೆಪಿಯವರು ಈ ಸರ್ಕಾರವನ್ನು ಅಸ್ಥಿರಗೊಳಿಸಲು ಸತತವಾಗಿ ಸಾಕಷ್ಟು ಪ್ರಯತ್ನ ಮಾಡ್ತಿದ್ದಾರೆ. ಬಿಜೆಪಿಯವರ ಆಮಿಷದಿಂದ ನಮಗೆ ಯಾವುದೇ ಆತಂಕ ಇಲ್ಲ ಎಂದು ಸಚಿವ ಜಿ.ಪರಮೇಶ್ವರ್ ಹೇಳಿದರು.
ಬಿಜೆಪಿಯಿಂದ ಕಾಂಗ್ರೆಸ್ನ 50 ಶಾಸಕರಿಗೆ ತಲಾ 50 ಕೋಟಿ ರೂ ಆಮಿಷ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಸದಾಶಿವನಗರ ನಿವಾಸದ ಬಳಿ ಪ್ರತಿಕ್ರಿಯಿಸಿದ ಸಚಿವರು, . ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಅಂತ ಗೊತ್ತಿದ್ದರೂ ಆಮಿಷ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳು ಒಂದಿಷ್ಟು ಮಾಹಿತಿ ಇಟ್ಕೊಂಡೇ ಆ ಹೇಳಿಕೆ ಕೊಟ್ಟಿದ್ದಾರೆ. ಅವರ ಆರೋಪದಲ್ಲಿ ಅರ್ಥವಿದೆ. ಬಿಜೆಪಿ, ಜೆಡಿಎಸ್ ನವರು ಸರ್ಕಾರ ಅಸ್ಥಿರಗೊಳಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿಯೇ ನಮ್ಮ ಶಾಸಕರಿಗೆ ಆಮಿಷವೊಡ್ಡುವ ಪ್ರಯತ್ನ ಮಾಡ್ತಿದ್ದಾರೆ. ಅದು ಸಾಧ್ಯವಿಲ್ಲ ಅಂತ ಗೊತ್ತಿದ್ದರೂ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ನಮ್ಮ ಸರ್ಕಾರ ಸುಭದ್ರವಾಗಿದೆ. ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಜೆಡಿಎಸ್ ಎಲ್ಲ ಪ್ರಯತ್ನ ಮಾಡ್ತಿದ್ದಾರೆ. ಶಾಸಕರಿಗೆ ಆಮಿಷ ತೋರಿಸೋದು ಬಿಜೆಪಿಯವರಿಗೆ ಅಭ್ಯಾಸವಾಗಿ ಹೋಗಿದೆ. ನಾವು ಸರ್ಕಾರ ಕೆಡವಲು, ಅಸ್ಥಿರಗೊಳಿಸಲು ಬಿಡೋದಿಲ್ಲ, ನಾವು ಇದನ್ನು ಎದುರಿಸ್ತೇವೆ. ಜನಾದೇಶ ನಮ್ಮ ಪರವಾಗಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದರು.
ಒಳಮೀಸಲಾತಿ ನಿಗದಿಗೆ ಏಕಸದಸ್ಯ ಆಯೋಗ ನೇಮಕ ಮಾಡಿದ್ದಾರೆ, ಇದು ಒಳ್ಳೆಯ ಬೆಳವಣಿಗೆ. ಒಳಮೀಸಲಾತಿಗೆ ಎಂಪೆರಿಕಲ್ ಡೇಟಾ ತೆಗೆದುಕೊಂಡು ಆಯೋಗ ಮಾಡ್ತಾರೆ. ಎಷ್ಟು ಪ್ರಮಾಣದ ಮೀಸಲಾತಿಗೆ ನಿಗದಿ ಮಾಡ್ತಾರೋ ಗೊತ್ತಿಲ್ಲ. ಆಯೋಗ ಏನು ವರದಿ ಕೊಡುತ್ತದೆಯೋ ಕಾದು ನೋಡಬೇಕು ಎಂದರು.
ಈವರೆಗೆ ರಾಜ್ಯದಲ್ಲಿ ಸ್ವಂತ ಶಕ್ತಿಯಿಂದ ಒಂದು ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಮಾತ್ರ ಅವರು ಅಧಿಕಾರಕ್ಕೆ ಬಂದಿದ್ದಾರೆ. ಈ ಸಲವೂ ಕಾಂಗ್ರೆಸ್ನ 50 ಮಂದಿ ಶಾಸಕರಿಗೆ ತಲಾ 50 ಕೋಟಿ ರೂ ಆಫರ್ ನೀಡಿ ಖರೀದಿಸಲು ಯತ್ನಿಸಿದ್ದರು. ಆದರೆ ನಮ್ಮ ಶಾಸಕರು ಆಮಿಷಕ್ಕೆ ಒಳಗಾಗಲಿಲ್ಲ ಎಂದು ಬುಧವಾರ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದರು.