ಉತ್ತರಪ್ರದೇಶ: ಆಗತಾನೆ ಮದುವೆ ಕಾರ್ಯಕ್ರಮ ಮುಗಿದು ಮನೆಗೆ ಹಿಂತಿರುಗುತ್ತಿದ್ದ ನವ ವಧು-ವರ ಇದ್ದ ಕಾರು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ವಧು ವರ ಸೇರಿ ಒಂದೇ ಕುಟುಂಬದ ಆರು ಮಂದಿ ಹಾಗೂ ರಿಕ್ಷಾ ಚಾಲಕ ಸೇರಿ ಒಟ್ಟು ಏಳು ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಶುಕ್ರವಾರ(ನ.15) ತಡರಾತ್ರಿ ಸಂಭವಿಸಿದೆ.
ಶುಕ್ರವಾರ ಜಾರ್ಖಂಡ್ ನಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿ ರಾತ್ರಿ ಕಾರಿನಲ್ಲಿ ಹಿಂತಿರುಗಿದ ಕುಟುಂಬ ಸದಸ್ಯರಿದ್ದ ಕಾರು ಧಂಪುರದ ರಾಷ್ಟ್ರೀಯ ಹೆದ್ದಾರಿ 74ರಲ್ಲಿ ದಟ್ಟ ಮಂಜು ಆವರಿಸಿದ್ದು ಸರಿಯಾಗಿ ರಸ್ತೆ ಗೋಚರ ಆಗದೆ ಎದುರಿಗಿದ್ದ ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡುವ ವೇಳೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯಲ್ಲಿದ್ದ ಕಮರಿಗೆ ಉರುಳಿ ಅವಘಡ ಸಂಭವಿಸಿದ್ದು ಈ ವೇಳೆ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ರಿಕ್ಷಾ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇನ್ನು ಕಾರಿನಲ್ಲಿ ವಧು ವರ ಸೇರಿ ಸುಮಾರು ಹನ್ನೊಂದು ಮಂದಿ ಇದ್ದರು ಎಂದು ಬಿಜ್ನೋರ್ ಎಸ್ಪಿ ಅಭಿಷೇಕ್ ತಿಳಿಸಿದ್ದಾರೆ ಅಪಘಾತ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ದೊಡ್ಡ ಅನಾಹುತ ಸಂಭವಿಸಿದೆ ಎಂದು ಹೇಳಿದ್ದಾರೆ ಅಪಘಾತದಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಿಎಂ ಯೋಗಿ ಸಂತಾಪ:
ಅಪಘಾತ ಮಾಹಿತಿ ಸಿಗುತ್ತಿದ್ದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ ಅಲ್ಲದೆ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.
ಅಪಘಾತದ ತೀವ್ರತೆಗೆ ಎರಡೂ ವಾಹನಗಳು ನುಜ್ಜು ಗುಜ್ಜಾಗಿವೆ, ಕಾರು ಚಾಲಕನ ಅತಿಯಾದ ವೇಗ ಜೊತೆಗೆ ದಟ್ಟ ಮಂಜಿನಿಂದ ರಸ್ತೆಯಲ್ಲಿ ಸರಿಯಾಗಿ ವಾಹನ ಗೋಚರಿಸಿಸದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.