ಬೀದರ್: ಅಧಿಕಾರ ದಾಹಕ್ಕಾಗಿ ಏನನ್ನು ಮಾಡಲು ಹೇಸದವರು ಬಿಜೆಪಿಯವರು. ಇದಕ್ಕೆ ಈ ಹಿಂದೆ 17 ಶಾಸಕರನ್ನು ಖರೀದಿಸಿರುವುದೇ ನಿದರ್ಶನ ಎಂದು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಶಾಸಕರಿಗೆ ಬಿಜೆಪಿ ನೂರು ಕೋಟಿ ಆಫರ್ ವಿಚಾರವಾಗಿ ಸೋಮವಾರ (ನ.18) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರದ ದಾಹಕ್ಕಾಗಿ ಬಿಜೆಪಿಯವರು ಯಾವ ಮಟ್ಟಕ್ಕೂ ಇಳಿಯುತ್ತಾರೆ. ಸಿಎಂ ಆಗಲು 2500 ಕೋಟಿ, ಸಚಿವರಾಗಲು 500 ಕೋಟಿ ರೂ. ಕೊಡಬೇಕು ಎಂದು ಸ್ವತಃ ಬಿಜೆಪಿ ಮುಖಂಡ ಯತ್ನಾಳ್ ಹೇಳಿದ್ದರು. ಬಿಜೆಪಿ ವಿರುದ್ಧ ಯತ್ನಾಳ್ ಏನೇ ಹೇಳಿದ್ದರೂ ಅದು ನೂರು ಪ್ರತಿಶತ ಸತ್ಯವಿದೆ ಎಂದರು.
ಕೇಂದ್ರ ಸಚಿವ ಕುಮಾರಸ್ವಾಮಿಗೆ ಸಚಿವ ಜಮೀರ್ ಖಾನ್ ‘ಕರಿಯʼ ಪದ ಬಳಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ವಿಷಯದಲ್ಲಿ ಈಗಾಗಲೇ ಸಿಎಂ, ಡಿಸಿಎಂ ಹೇಳಿಕೆ ನೀಡಿದ್ದಾರೆ. ಜಮೀರ್ ವಿರುದ್ದ ಶಿಸ್ತು ಕ್ರಮದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಬಿಜೆಪಿಯಲ್ಲಿ ಒಂದು ಮನೆ ನೂರು ಬಾಗಿಲು ಆಗಿವೆ. ಪಶ್ಚಾತ್ತಾಪ ಮಾಡಿಕೊಳ್ಳಲು ಬಿಜೆಪಿಯವರು ಪಾದಯಾತ್ರೆ ಮಾಡಲಿ. ವಕ್ಫ್ ವಿವಾದ ಹುಟ್ಟು ಹಾಕಿದ್ದು, ಮೊದಲು ನೋಟಿಸ್ ನೀಡಿದ್ದು ಬಿಜೆಪಿಯವರು. ಅಪರಾಧ ಮಾಡುವವರು, ದೂರು ನೀಡುವವರು, ವಿಚಾರಣೆ ಮಾಡುವವರು, ತೀರ್ಪು ನೀಡುವವರು ಎಲ್ಲವೂ ಬಿಜೆಪಿಯವರೇ. ಇದನ್ನೂ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ಬಿಜೆಪಿ ಕಾರ್ಡ್ ರದ್ದು ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಸಾಹುಕಾರರು, ಮನೆ ಇದ್ದವರು, ಸರ್ಕಾರಿ ನೌಕರರು, ತೆರಿಗೆ ಕಟ್ಟುವವರು ಬಿಪಿಎಲ್ ಕಾರ್ಡ್ ತೆಗೆದುಕೊಂಡಿದ್ದಾರೆ. ಬಡತನ ರೇಖೆಗಿಂತ ಕೆಳಗಿದ್ದವರಿಗೆ ಬಿಪಿಎಲ್ ಕೊಡಬೇಕು ಎಂಬ ನಿಯಮವಿದೆ. ಒಂದೊಂದು ಜಿಲ್ಲೆಯಲ್ಲಿ ಶೇ.95 ರಷ್ಟು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ನೈಜವಾಗಿ ಯಾರು ಬಡತನದಲ್ಲಿ ಇದ್ದು, ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅವರಿಗೆ ಯಾವುದೇ ವಂಚನೆಯಾಗುವುದಿಲ್ಲ ಎಂದರು.