ಮನೆ ರಾಜ್ಯ ಕಾಳಿಂಗ ಸರ್ಪಕ್ಕೆ ‘ಓಫಿಯೋಫೆಗಸ್ ಕಾಳಿಂಗ’ ಎಂಬ ವೈಜ್ಞಾನಿಕ ಹೆಸರು: ಈಶ್ವರ ಖಂಡ್ರೆ ಘೋಷಣೆ

ಕಾಳಿಂಗ ಸರ್ಪಕ್ಕೆ ‘ಓಫಿಯೋಫೆಗಸ್ ಕಾಳಿಂಗ’ ಎಂಬ ವೈಜ್ಞಾನಿಕ ಹೆಸರು: ಈಶ್ವರ ಖಂಡ್ರೆ ಘೋಷಣೆ

0

ಬೆಂಗಳೂರು: ಕರುನಾಡಿನ ಪಶ್ಚಿಮಘಟ್ಟ ಮತ್ತು ಮಲೆನಾಡಿನಲ್ಲಿ ಕಾಣಸಿಗುವ ಬೃಹತ್ ಕೃಷ್ಣ ಸರ್ಪಕ್ಕೆ ಓಫಿಯೋಫೆಗಸ್ ಕಾಳಿಂಗ ಎಂಬ ವೈಜ್ಞಾನಿಕ ಹೆಸರನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಅಧಿಕೃತವಾಗಿ ಘೋಷಣೆ ಮಾಡಿದರು.

Join Our Whatsapp Group

ಕಲ್ಲು ನಾಗರ ಕಂಡರೆ ಹಾಲೆವರಯ್ಯ, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬ ವಚನವಿದೆ. ಜನರಲ್ಲಿ ಹಾವುಗಳ ಬಗ್ಗೆ ಜನರಲ್ಲಿ ತುಂಬಾ ತಪ್ಪು ಕಲ್ಪನೆಗಳಿವೆ. ಯಾವ ಹಾವು ವಿಷಪೂರಿತ, ಯಾವ ಹಾವು ವಿಷ ರಹಿತ ಎಂಬುದು ತಿಳಿದಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಜನ ಭಯ ಪಡುವ ಹಾವುಗಳ ಬಗ್ಗೆ ಅಧ್ಯಯನ ನಡೆಸಿ ಅವುಗಳ ಸಂರಕ್ಷಣೆಗೆ ಶ್ರಮಿಸುವವರಿಗೆ ಅಭಿನಂದನೆ ಸಲ್ಲಲೇಬೇಕು. ಡಾ. ಗೌರಿಶಂಕರ್ ಮತ್ತು ತಂಡದವರು ಇಂದು ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಮತ್ತು ಮಲೆನಾಡಿನಲ್ಲಿರುವ ಅಪರೂಪದ ಅದರಲ್ಲೂ ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸಿರುವದಷ್ಟೇ ಅಲ್ಲದೆ ಅದಕ್ಕೆ ಕನ್ನಡತನದ ವೈಜ್ಞಾನಿಕವಾದ ಹೆಸರು ಇಡುವ ಈ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದರು.

ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುವ ಓಫಿಯೋಫೇಗಸ್ ಅಂದರೆ ಕಾಳಿಂಗ ಸರ್ಪಗಳೆಲ್ಲಾ ಒಂದೇ ಎಂದು ಬಹುತೇಕರು ಭಾವಿಸಿದ್ದರು. ಆದರೆ ಡಾ. ಗೌರಿಶಂಕರ್ ಮತ್ತು ತಂಡದವರು ಈ ಬಗ್ಗೆ ಅಧ್ಯಯನ ಮಾಡಿ ಕರ್ನಾಟಕದ ಕಾಳಿಂಗ ಸರ್ಪ ವಿಭಿನ್ನ ಪ್ರಭೇದಕ್ಕೆ ಸೇರಿದ್ದೆಂಬ ಅಂಶವನ್ನು ತಿಳಿಸಿರುತ್ತಾರೆ. ಇಂತಹ ಅಧ್ಯಯನಗಳು ರೋಚಕ ಮತ್ತು ವಿಸ್ಮಯಕಾರಿ ಹಾಗೂ ಅಷ್ಟೇ ಅಪಾಯಕಾರಿ ಎಂದು ಹೇಳಿದರು.

ಈಶ್ವರನ ಕೊರಳಲ್ಲಿ ಹಾವಿನ ಹೆಸರು ಕೂಡ ಕಾಳಿಂಗ. ಭಾಗವತದಲ್ಲಿ ಶ್ರೀಕೃಷ್ಣನ ಲೀಲೆಗಳ ವರ್ಣನೆಯಲ್ಲಿ, ಬಾಲಕೃಷ್ಣ ಕಾಳಿಂಗಸರ್ಪದ ಹೆಡೆಯ ಮೇಲೆ ನಿಂತು ನರ್ತಿಸಿದ ಎಂಬ ಕಥೆಯನ್ನು ನಾವು ಕೇಳಿದ್ದೇವೆ. ಈ ಕತೆ ಕಾಳಿಂಗಮರ್ಧನ ಎಂದೇ ಖ್ಯಾತವಾಗಿದೆ. ಅಂದರೆ ಕಾಳಿಂಗ ಎಂದರೆ ಕಪ್ಪು ನಾಗರ ಹಾವು, ಕೃಷ್ಣಸರ್ಪ ಎಂಬ ಕಲ್ಪನೆ ನಮ್ಮ ಕರುನಾಡಿನ ಪ್ರತಿಯೊಬ್ಬರಿಗೂ ತಿಳಿದಿದೆ. ಇದು ಅಚ್ಚ ಕನ್ನಡದ ಹೆಸರಾಗಿ ಜನಜನಿತವಾಗಿದೆ ಇದನ್ನೇ ಇಂದು ಅಧಿಕೃತವಾಗಿ ಕರೆಯುವುದು ಸಂತಸದ ವಿಷಯ ಎಂದರು.

ಇಂತಹ ಅಧ್ಯಯನ ತಂಡಗಳಿಗೆ ಅರಣ್ಯ ಇಲಾಖೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡುತ್ತಿದೆ. ಮುಂದೆಯೂ ಇಂತಹ ಅಧಿಕೃತ ಸಂಸ್ಥೆಗಳಿಗೆ ಎಲ್ಲ ರೀತಿಯ ಬೆಂಬಲ ನೀಡಲಾಗುವುದು ಎಂದರು.

ಹಾವು ಕಚ್ಚಿ ಸಾಯುವವರ ಸಂಖ್ಯೆಯೂ ರಾಜ್ಯದಲ್ಲಿ ಹೆಚ್ಚುತ್ತಿದೆ. ಜನರಲ್ಲಿ ಮೂಢ ನಂಬಿಕೆ ಇದೆ. ಹಾವು ಕಚ್ಚಿದಾಗ ಮಂತ್ರವಾದಿಯ ಬಳಿ ಹೋಗುತ್ತಾರೆ. ವಿಷಪೂರಿತವಲ್ಲದ ಹಾವು ಕಚ್ಚಿದ್ದರೆ ಬದುಕುತ್ತಾರೆ. ವಿಷದ ಹಾವು ಕಚ್ಚಿದ್ದರೆ ಸಾಯುತ್ತಾರೆ. ಹೀಗಾಗಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವಿನ ಕಡಿತಕ್ಕೆ ಚುಚ್ಚುಮದ್ದು ಲಭ್ಯವಾಗುವಂತೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಳಿಂಗ ಪ್ರತಿಷ್ಠಾನದ ಡಾ. ಗೌರಿಶಂಕರ್, ಪ್ರಧಾನಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಷ್ ಮಾಲ್ಕಡೆ,  ನಟ ವಿನಯ್ ರಾಜ್ ಕುಮಾರ್, ಸಂಗೀತ ಸಂಯೋಜಕ ರಿಕಿ ಕೇಜ್ ಮತ್ತಿತರರು ಪಾಲ್ಗೊಂಡಿದ್ದರು.