ಮನೆ ರಾಜ್ಯ ಪಿಎಸ್‌ ಐ ಅಕ್ರಮ: ವೈಜನಾಥ ಕಲ್ಯಾಣಿ ರೇವೂರ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಪಿಎಸ್‌ ಐ ಅಕ್ರಮ: ವೈಜನಾಥ ಕಲ್ಯಾಣಿ ರೇವೂರ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

0

ಕಲಬುರಗಿ (Kalaburagi): ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್ ಆಗಿದ್ದ ವೈಜನಾಥ ಕಲ್ಯಾಣಿ ರೇವೂರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ಆರೋಪಿಯು ಪ್ರಭಾವಿ ಅಧಿಕಾರಿಯಾಗಿದ್ದುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂಬ ಸಿಐಡಿ ಪರ ವಕೀಲ ಶಿವಶರಣಪ್ಪ ಹೋತಪೇಟ ಅವರ ವಾದ ಪುರಸ್ಕರಿಸಿದ ನ್ಯಾಯಾಧೀಶ ಶ್ರೀನಿವಾಸ ಕೆ.ಆರ್. ಅವರು ಅರ್ಜಿಯನ್ನು ವಜಾಗೊಳಿಸಿದರು.

ಅಭ್ಯರ್ಥಿಗಳಿಗೆ ಅಕ್ರಮವಾಗಿ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ನೆರವಾದ ಆರೋಪದ ಮೇರೆಗೆ ವೈಜನಾಥ ಅವರನ್ನು ಮೇ 6ರಂದು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.

ಇನ್ನು ಬುಧವಾರ ಬಂಧಿತರಾದ ಅಫಜಲ‍ಪುರದ ಅಸ್ಲಂ ಸೈಫುನ್ ಮುಲ್ಕ್ ಮುಜಾವರ ಹಾಗೂ ಮುನಾಫ್ ಜಮಾದಾರಗೆ ಏಳು ದಿನ ಹಾಗೂ ಅರ್‌.ಡಿ. ಪಾಟೀಲ ಸೋದರಳಿಯ ಪ್ರಕಾಶ ಉಡಗಿಗೆ 9 ದಿನಗಳವರೆಗೆ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಅಫಜಲಪುರ ತಾಲ್ಲೂಕು ಸೊನ್ನ ಗ್ರಾಮದ ಆರ್‌.ಡಿ. ಪಾಟೀಲ ಸಿಐಡಿ ಕಸ್ಟಡಿ ಅಂತ್ಯಗೊಂಡಿದ್ದರಿಂದ ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಲಬುರಗಿಯ ಎಂ.ಎಸ್. ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಪ್ರಭು ಶರಣಪ್ಪ ಎಂಬುವವರಿಗೆ ಬ್ಲೂಟೂತ್ ಮೂಲಕ ಉತ್ತರ ತಲುಪಿಸಿದ ಆರೋಪದ ಮೇರೆಗೆ ಪಾಟೀಲ ವಿರುದ್ಧ ನಗರದ ಸ್ಟೇಶನ್ ಬಜಾರ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಹೀಗಾಗಿ, ಮತ್ತೊಮ್ಮೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಇದಕ್ಕೂ ಮೊದಲು ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಹಲವು ಅಭ್ಯರ್ಥಿಗಳಿಗೆ ಅಕ್ರಮ ಮಾರ್ಗದ ಮೂಲಕ ಉತ್ತರ ತಲುಪಿಸಿದ ಆರೋಪದ ಮೇರೆಗೆ ಆರ್.ಡಿ. ಪಾಟೀಲ ಬಂಧನವಾಗಿತ್ತು.