ಮನೆ ರಾಜಕೀಯ ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

0

ವಿಜಯಪುರ: ಪಂಚಮಸಾಲಿ‌ ಮೀಸಲಾತಿ ಹೋರಾಟ ಪಕ್ಷಾತೀತವಾದ ಹೋರಾಟವಾಗಿದ್ದು, ಅದರಲ್ಲಿ ರಾಜಕಾರಣ ಇಲ್ಲ. ನಾನೂ ಹೋರಾಟದ ಮುಂಚೂಣಿಯಲ್ಲಿದ್ದೆ,ಈಗಲೂ ಹೋರಾಟ ಮಾಡುತ್ತಿದ್ದೇನೆ” ಎಂದು ಬುಧವಾರ(ನ27) ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ನೀಡಿದ್ದಾರೆ.

Join Our Whatsapp Group

ವಿಜಯಪುರ ನಗರದ ಹೊರ ಭಾಗದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ”ಪಂಚಮಸಾಲಿ‌ ಮೀಸಲಾತಿ ಹೋರಾಟ ಯಾವುದೇ ಸರ್ಕಾರದ ವಿರುದ್ಧ ಅಲ್ಲ, ಸಮಾಜಕ್ಕೆ ನ್ಯಾಯ ಕೊಡಬೇಕೇಂದು ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ‌ ಒಡಕು ಇಲ್ಲ’ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ‌ ಉಗ್ರ ಹೋರಾಟ ಮಾಡಿ, ಈಗ ಹೋರಾಟ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ‘ಹೋರಾಟ ಮೊದಲಿನಂತೆಯೇ ಇದೆ. ಸಚಿವೆಯಾದ ಕಾರಣ ಕೆಲಸಗಳ ಒತ್ತಡವಿರುವ ಕಾರಣ ಕೆಲ ಹೋರಾಟದಲ್ಲಿ ಭಾಗಿಯಾಗಿಲ್ಲ. ಕೆಲ ಹೋರಾಟಗಳಿಗೆ ನನ್ನ ಸಹೋದರ ಹಾಗೂ ಪುತ್ರನನ್ನು ಕಳುಹಿಸಿದ್ದೇನೆ.

ಸಚಿವೆಯಾಗಿ ಸಮಾಜದ ಋಣ ತೀರಿಸದಿದ್ದರೆ, ಮನುಷ್ಯತ್ವ ಅಲ್ಲ. ನಾನು ನಿರಂತರವಾಗಿ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಕೆಲ ಹೋರಾಟಗಳ ದಿನಾಂಕ ಹೊಂದಾಣಿಕೆಯಾಗದ ಕಾರಣ ಹೋಗಿಲ್ಲ. ಸಮಾಜ ಬಿಟ್ಟು ನಾನಿಲ್ಲ, ನನ್ನ ಬಿಟ್ಟು ಸಮಾಜವಿಲ್ಲ. ಅಧಿವೇಶನದ ವೇಳೆ ಹೋರಾಟ ಮಾಡುತ್ತೇವೆ. ಸ್ವಾಮೀಜಿಗಳು ಸಹ ಸರಕಾರಕ್ಕೆ ಮುಜುಗರ ತರುವಂತ ಹೋರಾಟ ಮಾಡಬಾರದು ಎಂದು‌ ಹೇಳಿಕೆ ನೀಡಿದ್ದಾರೆ. ನಾವು ಯಾವುದೇ ಸರಕಾರದ ವಿರುದ್ಧ ಹೋರಾಟ ಮಾಡಿಲ್ಲ. ಸಮಾಜದ ಪರವಾಗಿ ಹೋರಾಟ ಮಾಡಿದ್ದೇವೆ’ ಎಂದರು.

ಪಂಚಮಸಾಲಿ ಮೀಸಲಾತಿಗಾಗಿ ನಾನು ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನಾಲ್ಕು ಬಾರಿ, ಹಾಲಿ ಸಿಎಂ ಸಿದ್ದರಾಮಯ್ಯ ಅವರನ್ನು ಮೂರು ಬಾರಿ ಭೇಟಿಯಾಗಿದ್ದೆ. ಮರ್ಯಾದೆಯ ಹದ್ದಿನಲ್ಲಿ ಹಿಂದೆ ಮಾತನಾಡಿದ್ದೇನೆ,

ಮುಂದೆಯೂ ಮಾತನಾಡುವೆ. ಪಂಚಮಸಾಲಿ ಸಮಾಜದ ಪರವಾಗಿ ಧ್ವನಿ ಎತ್ತುವೆ ಎಂದರು.

 ‘ಭಾರತದಲ್ಲಿ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು’ ಎಂದ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಚಂದ್ರಶೇಖರ ನಾಥ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ’ಸ್ವಾಮೀಜಿಗಳ ಬಗ್ಗೆ ಮಾತನಾಡುವಷ್ಟು ದೊಡ್ಡವಳಲ್ಲ.ಅದು ನಮ್ಮ ಸಂಸ್ಕೃತಿಯಲ್ಲ, ಸ್ವಾಮೀಜಿಗಳ ಸಂಸ್ಕೃತಿಯೂ ಅಲ್ಲ. ನಾವು ನಮ್ಮ ಚೌಕಟ್ಟಿನಲ್ಲಿರಬೇಕು. ನಿನ್ನೆಯೇ ಸಂವಿಧಾನ ದಿನಾಚರಣೆ ಮಹೋತ್ಸವ ಆಚರಣೆ ಮಾಡಿದ್ದೇವೆ. ನಮ್ಮ ದೇಶ, ಎಲ್ಲ ದಾರ್ಶನಿಕರು ಭಾಷಿಕರು ಧರ್ಮದವರು ಎಲ್ಲಾ‌ ಜಾತಿ ಜನಾಂಗ ಒಳಗೊಂಡ ಹಕ್ಕು ನಮ್ಮ ಸಂವಿಧಾನ‌ ನೀಡಿದೆ. ರಾಷ್ಟ್ರಪತಿಗಳಿಗೂ ಮತದಾನ ಹಕ್ಕು ಸಾಮಾನ್ಯನಿಗೂ ಇದೇ ಹಕ್ಕು ಇದೆ. ಸ್ವಾಮಿಜಿಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು. ಇಂಥ ಮಾತನಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳಬಾರದು ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ ‘ನಾನು ಹೈಕಮಾಂಡೂ ಅಲ್ಲ, ಕೆಪಿಸಿಸಿ ಅಧ್ಯಕ್ಷೆಯೂ ಅಲ್ಲ’ ಎಂದರು.