ನವದೆಹಲಿ: ಕಳೆದ ಆರು ವರ್ಷದಲ್ಲಿ ದೇಶದಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಆಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ದೇಶದಲ್ಲಿ ಮಹಿಳಾ ಉದ್ಯೋಗಿಗಳು ಎಷ್ಟಿದ್ದಾರೆ ಎನ್ನುವ ಮಾಹಿತಿಯನ್ನು ಕೋರಿ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಸ್ ಕೇಳಿದ ಪ್ರಶ್ನೆಗೆ ಸಚಿವೆ ಕರಂದ್ಲಾಜೆ ಆ ಸಂಬಂಧಿತ ಮಾಹಿತಿ ಬಹಿರಂಗಪಡಿಸಿದ್ದಾರೆ. ಆ ಮಾಹಿತಿ ಪ್ರಕಾರ, 2017-18ರಲ್ಲಿ ಮಹಿಳೆಯರ ಕಾರ್ಮಿಕ ಸಂಖ್ಯಾ ಪ್ರಮಾಣ (ಡಬ್ಲ್ಯುಪಿಆರ್) ಶೇ. 22ರಷ್ಟಿತ್ತು. 2023-24ರಲ್ಲಿ ಇದು ಶೇ. 40.3ಕ್ಕೆ ಏರಿದೆ. ಇಲ್ಲಿ ಡಬ್ಲ್ಯುಪಿಆರ್ ಎಂದರೆ ಒಟ್ಟಾರೆ ಜನಸಂಖ್ಯೆಯಲ್ಲಿ ಕಾರ್ಮಿಕರ ಸಂಖ್ಯೆ ಎಷ್ಟು ಎಂಬುದು.
ಭಾರತದಲ್ಲಿ ಪುರುಷರೂ ಒಳಗೊಂಡಂತೆ ಒಟ್ಟಾರೆ ಕಾರ್ಮಿಕ ಜನಸಂಖ್ಯಾ ಅನುಪಾತ ಶೇ. 58.2ರಷ್ಟಿದೆ. ಇದರಲ್ಲಿ ಪುರುಷರ ಡಬ್ಲ್ಯುಪಿಆರ್ ಶೇ. 76.3ರಷ್ಟಿದೆ. ಇದಕ್ಕೆ ಹೋಲಿಸಿದರೆ ಮಹಿಳಾ ಡಬ್ಲ್ಯುಪಿಆರ್ ಬಹಳ ಕಡಿಮೆ ಇದೆ. ಆದರೆ, ಇತ್ತೀಚಿನ ವರ್ಷಗಳಿಂದ ಮಹಿಳಾ ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿರುವುದು ಗಮನಾರ್ಹವಾದ ಸಂಗತಿ. ಇನ್ನು, ಕೆಲಸ ಮಾಡಲು ಸಿದ್ಧ ಇರುವ ಮಹಿಳೆಯರ ಸಂಖ್ಯೆಯನ್ನೂ ಸೇರಿಸಿದರೆ ಅದು ಶೇ. 41.7ರಷ್ಟಾಗುತ್ತದೆ.
ಇಲ್ಲಿ ಕಾರ್ಮಿಕರೆಂದರೆ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರು ಮಾತ್ರವಲ್ಲ, ಎಲ್ಲಾ ರೀತಿಯ ಉದ್ಯೋಗಿಗಳನ್ನು ಕಾರ್ಮಿಕರೆಂದು ಪರಿಗಣಿಸಲಾಗುತ್ತದೆ. ಸಾಫ್ಟ್ವೇರ್ ಎಂಜಿನಿಯರ್ ಕೂಡ ಕಾರ್ಮಿಕ ಅಥವಾ ಲೇಬರ್ ಫೋರ್ಸ್ನ ಭಾಗವಾಗಿ ಪರಿಗಣಿತವಾಗುತ್ತಾರೆ.
ನಿನ್ನೆ ರಾಜ್ಯಸಭೆಗೆ ಲಿಖಿತ ಉತ್ತರದ ಮೂಲಕ ಮಹಿಳಾ ಕಾರ್ಮಿಕ ಶಕ್ತಿ ಬಗ್ಗೆ ಮಾಹಿತಿ ನೀಡಿದ ಶೋಭಾ ಕರಂದ್ಲಾಜೆ ಅವರು, ಸರ್ಕಾರದಿಂದ ಮಹಿಳೆಯರಿಗೆ ಸಿಗುತ್ತಿರುವ ಉತ್ತೇಜನದ ಬಗ್ಗೆಯೂ ವಿವರ ನೀಡಿದ್ದಾರೆ.
‘ಉದ್ಯೋಗಸೃಷ್ಟಿಸುವುದರ ಜೊತೆಗೆ ವ್ಯಕ್ತಿಯ ಉದ್ಯೋಗಾರ್ಹತೆಯನ್ನು ಹೆಚ್ಚಿಸುವುದೂ ಸರ್ಕಾರಕ್ಕೆ ಆದ್ಯತೆ ಎನಿಸಿದೆ. ಕಾರ್ಮಿಕ ಬಳಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ’ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.