ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿದ ನಂತರ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುವಂತೆ ಕೋರಿ ಅಲಾಹಾಬಾದ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಡಾ ಆನಂದ್ ಪ್ರಕಾಶ್ ತಿವಾರಿ ಎಂಬುವವರು ಸಲ್ಲಿಸಿದ ಮನವಿಯಲ್ಲಿ ನಗರ ಪೊಲೀಸ್ ಆಯುಕ್ತ, ಪೊಲೀಸ್ ಅಧೀಕ್ಷಕ (ಎಸ್‌ಪಿ), ಜಿಲ್ಲಾಧಿಕಾರಿ (ಎಸ್‌ಪಿ), ಉಪ ವಿಭಾಗಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳ ಪಾತ್ರ ಮತ್ತು ಅವರು ಕೈಗೊಂಡ ಕ್ರಮಗಳ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ರಚಿಸಬೇಕು ಎಂದು ಕೋರಲಾಗಿದೆ.
ಘಟನೆಯಲ್ಲಿ ರಾಜ್ಯದ ಅಧಿಕಾರಿಗಳ ಪಾತ್ರ ಮತ್ತು ಲೋಪಗಳನ್ನು ಪರಿಶೀಲಿಸಿ ನಿರ್ದಿಷ್ಟ ಸಮಯದೊಳಗೆ ವರದಿ ಸಲ್ಲಿಸಬೇಕಿದ್ದು ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರದ ವ್ಯಾಪ್ತಿಯಲ್ಲಿಲ್ಲದ ಸ್ವತಂತ್ರವಾಗಿರುವ ಕೇಂದ್ರ ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸುವಂತೆ ಅರ್ಜಿದಾರರು ಪ್ರಾರ್ಥಿಸಿದ್ದಾರೆ.
ಸಂಭಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯ ಎರಡನೇ ಸಮೀಕ್ಷೆ ನಡೆಸದಂತೆ ಆಗ್ರಹಿಸಿ ನ. 24ರಂದು ನಡೆದ ಪ್ರತಿಭಟನೆ ಘರ್ಷಣೆಗೆ ತಿರುಗಿ ನಾಲ್ವರು ಮೃತಪಟ್ಟಿದ್ದರು.