ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಕಾರ್ಮಾಡು ಗ್ರಾಮದ ಮನೆಯೊಂದರ ಆವರಣದಲ್ಲಿ ನಿಷೇಧಿತ ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರ್ಮಾಡು ಗ್ರಾಮದ ಮುಕ್ಕಾಟಿಕೊಪ್ಪಲು ನಿವಾಸಿ ವಿ.ಬಿ.ಮುತ್ತಣ್ಣ(68) ಬಂಧಿತ ಆರೋಪಿಯಾಗಿದ್ದು, 5 ಕೆ.ಜಿ 500ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಮನೆಯ ಕಾಂಪೌಂಡ್ ಒಳಗೆ ನಿಷೇಧಿತ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆದಿರುವ ಕುರಿತು ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಆರ್.ಮೋಹನ್ ಕುಮಾರ್, ವೀರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ವಿರಾಜಪೇಟೆ ಗ್ರಾಮಾಂತರ ಠಾಣಾ ಎಸ್ಐ ವಾಣಿಶ್ರೀ ಬಿ.ಎಸ್ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.