ಮನೆ ಅಪರಾಧ ಮೈಸೂರು: ಮದ್ಯ ಕುಡಿಯಲು ಹಣ ಕೊಡಲಿಲ್ಲವೆಂದು ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಮೈಸೂರು: ಮದ್ಯ ಕುಡಿಯಲು ಹಣ ಕೊಡಲಿಲ್ಲವೆಂದು ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

0

ಮೈಸೂರು: ಮದ್ಯ ಕುಡಿಯಲು ಹಣ ಕೊಡದ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಮೈಸೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Join Our Whatsapp Group

ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆಯ ನಾಗಮ್ಮನ ಬಡಾವಣೆ ಮುಸ್ಲಿಂ ಬ್ಲಾಕ್​ ನಿವಾಸಿ ನಾಗರಾಜು ಎಂಬವರ ಪುತ್ರ ಮಂಜುನಾಥ ಅ. ಮಂಜು(37) ಶಿಕ್ಷೆಗೆ ಗುರಿಯಾದವ. ಇವರ ಪತ್ನಿ ಶೋಭಾ ಕೊಲೆಯಾದವರು.

ನಾಲ್ಕು ವರ್ಷಗಳ ಹಿಂದೆ ಶೋಭಾ ಅವರು ಮಂಜುನಾಥನನ್ನು 2ನೇ ಮದುವೆಯಾಗಿದ್ದು, ನಾಗಮ್ಮನ ಬಡಾವಣೆಯಲ್ಲಿ ವಾಸವಿದ್ದರು. 2022ರ ಮೇ 29ರ ಸಂಜೆ 7ಕ್ಕೆ ಮಂಜುನಾಥನು ಕುಡಿಯಲು ಹಣ ಕೊಡುವಂತೆ ಶೋಭಾರೊಂದಿಗೆ ಗಲಾಟೆ ಮಾಡಿದ್ದು, ಹಣ ಕೊಡದಿದ್ದಾಗ ಶೋಭಾರ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದನು. ಇದು ತನಿಖೆಯಿಂದ ದೃಢಪಟ್ಟಿದೆ ಎಂದು ಹೆಚ್. ಡಿ. ಕೋಟೆ ಠಾಣೆಯ ಆಗಿನ ಇನ್ಸ್​ಪೆಕ್ಟರ್ ಬಸವರಾಜು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ರಮೇಶ ಅವರು, ಆರೋಪಿ ಮಂಜುನಾಥ ಅಪರಾಧ ಎಸಗಿರುವುದು ಸಾಬೀತಾಗಿದೆ ಎಂದು ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ. ನಾಗರಾಜ ವಾದಿಸಿದ್ದರು.