ಮನೆ ರಾಜ್ಯ ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು: ಸಚಿವ ದರ್ಶನಾಪುರ ಕಿಡಿ

ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು: ಸಚಿವ ದರ್ಶನಾಪುರ ಕಿಡಿ

0

ಯಾದಗಿರಿ: ಜಿಲ್ಲಾಮಟ್ಟದ ದಿಶಾ ಸಭೆ ನಡೆಯುತ್ತಿದೆ. ಮುಖ್ಯವಾದ ಇಲಾಖೆಯ ಅಧಿಕಾರಿಗಳೇ ಬರುವುದಿಲ್ಲ ಎಂದರೆ ಸಭೆಯ ಆಶಯಕ್ಕೆ ಧಕ್ಕೆ ತರುತ್ತೀರಿ. ನಾವು ಕೇಳುವ ಮಾಹಿತಿ ಯಾರು ನೀಡುತ್ತಾರೆ. ಕಿರಿಯ ಅಧಿಕಾರಿಗಳು ಬಂದು ಏನು ಮಾಡುತ್ತೀರಾ, ಮೇಲಾಧಿಕಾರಿಗಳಿಗೆ ಬೇರೆ ಕೆಲಸ ಏನಿದೆ. ರಾಯಚೂರು ಸಂಸದರು ಬಂದಿದ್ದಾರೆ. ಶಾಸಕರು, ಸಚಿವರಿದ್ದಾರೆ. ಇವರಿಗಿಂತ ಮುಖ್ಯವಾದ ಬೇರೆ ಕೆಲಸ ಏನಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕೋಪದಿಂದ ಅಧಿಕಾರಿಗಳಿಗೆ ಪ್ರಶ್ನಿಸಿದರು.

Join Our Whatsapp Group

ಶನಿವಾರ (ನ.30) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಯಚೂರು ಸಂಸದ ಕುಮಾರ ನಾಯಕ ಅವರ ಅಧ್ಯಕ್ಷತೆಯಲ್ಲಿ ಜರುಗಿದ ದಿಶಾ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಸ್ಥೆಯ ಯೋಜನೆ ಅಧಿಕಾರಿಗಳು ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಅನುಪಸ್ಥಿತಿ ಕಂಡು ಸಚಿವ ಶರಣಬಸಪ್ಪ ದರ್ಶನಾಪುರ ಆಕ್ರೋಶದಿಂದ ಮಾತನಾಡಿದರು.

ಜಿಲ್ಲೆಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಮಾಹಿತಿ ತಿಳಿಸಬೇಕು. ಇಷ್ಟು ಬೇಜವಾಬ್ದಾರಿಯಿಂದ ಸಭೆಗೆ ನಿಮ್ಮನ್ನು ಕಳುಹಿಸುತ್ತಾರೆಂದರೆ ನಾವು ಸಭೆಗೆ ಯಾಕೆ ಬಂದಿದ್ದೇವೆ ಎನ್ನುವ ಅರಿವಾದರು ಇದೆಯಾ ನಿಮಗೆ ಎಂದು ಆಕ್ರೋಶಗೊಂಡರು.

ಪಿಡಿ (ಯೋಜನಾ ಅಧಿಕಾರಿಗಳು) ಸಭೆಗೆ ಬರುವುದಿಲ್ಲ ಎಂದರೆ ಸಭೆಗೆ ರಸ್ತೆಯ ಬಗ್ಗೆ ಮಾಹಿತಿ‌ ನೀಡುವವರು ಯಾರು?, ರಾಯಚೂರುನಲ್ಲಿ ಕೂತು ಅಧಿಕಾರಿಗಳು ಏನು ಮಾಡುತ್ತಾರೆ. ಸಚಿವರು, ಶಾಸಕರು ಹಾಗೂ ಸಂಸದರೇ ಇಲ್ಲಿ ಇರುವಾಗ ಪಿಡಿ ಎಲ್ಲಿ, ರಾಯಚೂರಿನಲ್ಲಿ ಮುಖ್ಯಮಂತ್ರಿಗಳು ಬಂದಿದ್ದಾರಾ ಎಂದು ಪ್ರಶ್ನಿಸಿದರು.

ಇನ್ನೊಂದು ತಾಸಿನಲ್ಲಿ ಸಭೆಗೆ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿಗಳು ಬರಬೇಕು. ಅವರಿಗೆ ಕರೆ ಮಾಡಿ ಬರಲು ಹೇಳಿ ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದರು.