ಚನ್ನಪಟ್ಟಣ ಉಪಚುನಾವಣೆ ಮುಕ್ತಾಯವಾಗಿದ್ದು, ನಿಖಿಲ್ ಕುಮಾರಸ್ವಾಮಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಪರಭವಗೊಂಡಿದ್ದಾರೆ. ಕ್ಷೇತ್ರದ ಮತದಾರರಿಗೆ ಜೆಡಿಎಸ್ ನಿಂದ ಕೃತಜ್ಞತೆ ಸಮಾವೇಶ ಏರ್ಪಡಿಸಲಾಗಿತ್ತು,ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು, ಚನ್ನಪಟ್ಟಣ ಸೋಲಿನ ಜವಾಬ್ದಾರಿ ನಾನೇ ಹೊರುತ್ತೇನೆ ಎಂದರು.
ಚನ್ನಪಟ್ಟಣ ಸೋಲಿಗೆ ನನ್ನ ನಿಧಾನಗತಿಯ ತೀರ್ಮಾನಗಳು ಕಾರಣ ಆಗಿವೆ, ಆಕಸ್ಮಿಕವಾಗಿ ಮಂಡ್ಯಕ್ಕೆ ಹೋಗಬೇಕಾದ ಪರಿಸ್ಥಿತಿ ಬಂತು. ಮಂಡ್ಯಕ್ಕೆ ನಿಖಿಲ್ ನಿಲ್ಲಿಸಬೇಕೆಂದು ಸಾ.ರಾ.ಮಹೇಶ್ ಮೂರ್ನಾಲ್ಕು ತಿಂಗಳು ಒತ್ತಡ ಹಾಕಿದ್ರು. ಅದರೆ ನಿಖಿಲ್ ರಾಮನಗರ ಜಿಲ್ಲೆಯಿಂದಲೇ ಹೋರಾಟ ಮಾಡಲು ಗಟ್ಟಿ ನಿರ್ಧಾರ ಮಾಡಿದ್ರು, ಹಾಗಾಗಿ ನಾನು ಮಂಡ್ಯದಲ್ಲಿ ಸ್ಪರ್ಧೆ ಮಾಡಿದೆ. ನಿಖಿಲ್ ಅಧಿಕಾರಕ್ಕಾಗಿ ಹೋಗಿದ್ರೆ ಅವರೇ ಮಂಡ್ಯಕ್ಕೆ ಹೋಗ್ತಿದ್ರು ಎಂದರು.
ಪ್ರತಿ ಚುನಾವಣೆಯಲ್ಲಿ ಒಂದೊಂದು ಜಿಲ್ಲೆಗೆ ಹೋಗುವುದು ಸರಿಯಲ್ಲ ಎಂದ್ರು. ಇಲ್ಲಾಂದ್ರೆ ನಿಖಿಲ್ ಮಂಡ್ಯದಲ್ಲಿ ಸ್ಪರ್ಧೆ ಮಾಡ್ತಿದ್ರು, ಇದು ದೇವರ ಸಭೆ,ದೇವೇಗೌಡರ ಕುಟುಂಬಕ್ಕೆ ದೇವರ ಅನುಗ್ರಹ ಇದೇ. ಪಾಪ ಹೇಳ್ತಾರೆ ಟೂರಿಂಗ್ ಟಾಕೀಸ್ ಅಂತಾರೆ. ಯಾವುದೇ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲುವ ಶಕ್ತಿ ಇರೋದು ದೇವೇಗೌಡರ ಕುಟುಂಬಕ್ಕೆ ಮಾತ್ರ. ನಿಖಿಲ್ ಬಗ್ಗೆ ಯೋಚನೆ ಮಾಡಿದ್ರೆ , ನಾನು ಮಂಡ್ಯಕ್ಕೆ ಹೋದ ದಿನದಿಂದಲೇ ಇಲ್ಲಿ ವೇದಿಕೆ ಸಿದ್ಧ ಮಾಡ್ತಿದ್ದೆ ಎಂದರು.
ಹಾಸನದಲ್ಲಿ ಸಿದ್ದರಾಮೋತ್ಸವ ಮಾಡ್ತಿದ್ದಾರೆ,ಯಾಕಪ್ಪ ಸಿದ್ದರಾಮೋತ್ಸವ, ಅಹಿಂದ ಸಮಾವೇಶ ಮಾಡಲು ಹೊರಟ್ಟಿದ್ದೀರಿ. ಏನು ಸಂದೇಶ ಕೊಡ್ತೀರಿ ನೀವು. ದಲಿತರಿಗೆ ಯಾವ ಸಂದೇಶ ಕೊಡ್ತೀರಿ ನೀವು. ಎಷ್ಟು ಜನ ದಲಿತರಿಗೆ ಗಂಗಾ ಕಲ್ಯಾಣ ಯೋಜನೆ ಕೊಟ್ಟಿದ್ದೀರಿ, ವಾಲ್ಮೀಕಿ ಆಯ್ತು, ಈಗ ಭೋವಿ ಹಗರಣ ಬರ್ತಿದೆ. ನಾಚಿಕೆ ಆಗಲ್ವ ನಿಮ್ಮ ಸರ್ಕಾರಕ್ಕೆ ಎಂದು ಗರಂ ಆದರು.
ಪ್ರಿಯಾಂಕಾ ಗಾಂಧಿ ಕಾನ್ಸ್ಟಿಟ್ಯೂಷನ್ ಬುಕ್ ಹಿಡಿದು ಪ್ರಮಾಣವಚನ ಸ್ವೀಕಾರ ಮಾಡ್ತಾರೆ. ನಿಮ್ಮ ಯೋಗ್ಯತೆಗೆ 17 ತಿಂಗಳಾಯ್ತು ಜಿ.ಪಂ, ತಾ.ಪಂ ಚುನಾವಣೆ ನಡೆಸಲು ಆಗಿಲ್ಲ ನಿಮ್ಮ ಸರ್ಕಾರಕ್ಕೆ. ಅಂಬೇಡ್ಕರ್ ರವರ ಸಂವಿಧಾನ ಉಳಿಸುತ್ತೀರಾ ನೀವು. ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರ ,ಮಂತ್ರಿಗಳಿಗೆ ಮಾನ ಮರ್ಯಾದೆ ಇದೆಯಾ. ಗರ್ಭಿಣಿಯರು ಕಳಪೆ ಚಿಕಿತ್ಸೆಯಿಂದ ಸಾವನ್ನಪ್ಪಿದ್ದಾರೆ, ಯಾರಾದರೂ ಧ್ವನಿ ಎತ್ತಿದ್ದೀರಾ?. ಬೈ ಎಲೆಕ್ಷನ್ ನಿಂದ ಯಾವುದೇ ಫಲಿತಾಂಶ ನಿರ್ಧಾರ ಆಗಲ್ಲ, ಮುಂದೆ ಜನರೇ ಉತ್ತರ ಕೊಡ್ತಾರೆ ಎಂದರು.
ರಾಮನಗರ ಜಿಲ್ಲೆಯಿಂದ ಅಷ್ಟು ಸುಲಭವಾಗಿ ಯಾರಿಂದಲೂ ಖಾಲಿ ಮಾಡಿಸಲು ಸಾಧ್ಯವಿಲ್ಲ.ಮುಂದಿನ ಚುನಾವಣೆಯಲ್ಲಿ ರಾಮನಗರದ ಎಲ್ಲಾ ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ. ಈ ಬಾರಿಯ ಸೋಲಿನ ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ. ಚನ್ನಪಟ್ಟಣ ದಿಂದ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು.
ನಮ್ಮ ಧ್ವನಿಯನ್ನು ಅಷ್ಟು ಸುಲಭವಾಗಿ ಅಡಗಿಸಲು ಸಾಧ್ಯವಿಲ್ಲ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಚನ್ನಪಟ್ಟಣ ಜನರನ್ನು ಕುಮಾರಸ್ವಾಮಿ ಆಗಲೀ, ನಿಖಿಲ್ ಕುಮಾರಸ್ವಾಮಿ ಆಗಲೀ ನಡು ನೀರಲ್ಲಿ ಕೈಬಿಟ್ಟು ಹೋಗಲ್ಲ ಎಂದರು.