ನವದೆಹಲಿ(New Delhi): ಪುರಿಯ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಒಡಿಶಾ ಸರ್ಕಾರವು ಅಕ್ರಮವಾಗಿ ಉತ್ಖನನ ನಡೆಸುತ್ತಿದ್ದು, ಕಟ್ಟಡ ನಿರ್ಮಾಣ ಕಾರ್ಯ ನಡೆಸುತ್ತಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಶುಕ್ರವಾರ ಅರ್ಜಿಯನ್ನು ವಜಾಗೊಳಿಸಿದ್ದು, ಹೆಚ್ಚಿನ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ನಿರ್ಮಾಣ ಕಾಮಗಾರಿಯು ನಡೆಯುತ್ತಿದೆ. ಇಲ್ಲಿ ಸಲ್ಲಿಕೆಯಾಗಿರುವ ಪಿಐಎಲ್ ಸಾರ್ವಜನಿಕ ಹಿತಾಸಕ್ತಿಗೇ ಹಾನಿಯುಂಟು ಮಾಡುವಂತಿದೆ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಪಿಐಎಲ್‌ಗಳು ಅಣಬೆಗಳಂತೆ ಬೆಳೆಯುತ್ತಿವೆ. ಇದು ಕಾನೂನಿನ ದುರುಪಯೋಗ. ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸುವ ಅಭ್ಯಾಸಕ್ಕೆ ಅರ್ಜಿ ತಿರಸ್ಕಾರವು ಎಚ್ಚರಿಕೆಯಾಗಿದೆ ಎಂದು ಉಚ್ಛ ನ್ಯಾಯಾಲಯ ತಿಳಿಸಿದೆ.
ದೇವಸ್ಥಾನದಲ್ಲಿ ಅಕ್ರಮ ಉತ್ಖನನ ಮತ್ತು ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿ ಅರ್ಧೆಂದು ಕುಮಾರ್ ದಾಸ್ ಮತ್ತು ಇತರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.