ಮನೆ ರಾಜಕೀಯ ಅಧಿಕಾರ ಹಂಚಿಕೆಗೆ ಒಪ್ಪಂದವಾಗಿರುವುದು ನಿಜ: ಡಿ ಕೆ ಶಿವಕುಮಾರ್

ಅಧಿಕಾರ ಹಂಚಿಕೆಗೆ ಒಪ್ಪಂದವಾಗಿರುವುದು ನಿಜ: ಡಿ ಕೆ ಶಿವಕುಮಾರ್

0

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಆದರೆ, ಅಧಿಕಾರಕ್ಕೆ ಸಂಬಂಧಿಸಿ ನಮ್ಮ ನಡುವೆ ಒಪ್ಪಂದವಾಗಿರುವುದು ನಿಜ. ಅದನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

Join Our Whatsapp Group

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುಖ್ಯಮಂತ್ರಿ ಹುದ್ದೆ, ಸಿದ್ದರಾಮಯ್ಯ ಹಾಗೂ ಗಾಂಧಿ ಕುಟುಂಬದೊಂದಿನ ತಮ್ಮ ಸಂಬಂಧ ಕುರಿತು ಡಿಕೆ.ಶಿವಕುಮಾರ್ ಅವರು ಮಾತನಾಡಿದ್ದಾರೆ.

ಈ ವೇಳೆ ಮುಖ್ಯಮಂತ್ರಿ ಹುದ್ದೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಮುಖ್ಯಮಂತ್ರಿ ಹುದ್ದೆ ಕುರಿತು ಸದ್ಯಕ್ಕೆ ಚರ್ಚೆ ಮಾಡುವುದಿಲ್ಲ. ಪ್ರಸ್ತುತ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆದರೆ, ಅಧಿಕಾರಕ್ಕೆ ಸಂಬಂಧಿಸಿ ಒಪ್ಪಂದವಾಗಿರುವುದು ನಿಜ. ಅದನ್ನು ಈಗ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ಈ ಕುರಿತು ಸಮಯ ಬಂದಾಗ ಹೇಳುತ್ತೇನೆಂದು ಹೇಳಿದ್ದಾರೆ.

ಪಕ್ಷಕ್ಕಾಗಿ ಹಣಬಲ‌, ತೋಳ್ಬಲ ಎರಡರ ಮೂಲಕವೂ ದುಡಿದರೂ ಸಿಎಂ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ನನ್ನ ಬಲ ಮತ್ತು ದುರ್ಬಲ ಎರಡೂ ಗೊತ್ತಿದೆ. ನನ್ನ ಶಕ್ತಿಯಿಂದಲೇ ಕೊಟ್ಟಿರುವ ಕೆಲಸ‌ ಮಾಡಿ ಮುಗಿಸಿದ್ದೇನೆ. ನನ್ನ ದುರ್ಬಲ ಏನಂದ್ರೆ ನಾನು ಯಾವತ್ತು ಹೈಕಮಾಂಡ್​ಗೆ ಬ್ಲ್ಯಾಕ್ ಮೇಲ್ ಮಾಡಿಲ್ಲ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ, ಯಾವತ್ತೂ ಹೈಕಮಾಂಡ್ ವಿರುದ್ಧ ಹೋಗುವುದಿಲ್ಲ. ನನಗೆ ಗಾಂಧಿ ಕುಟುಂಬದ ಮೇಲೆ ಪ್ರೀತಿ ಇದೆ. ಗಾಂಧಿ ಕುಟುಂಬಕ್ಕೆ ನಾನು ಲಾಯಲ್ ಆಗಿದ್ದೇನೆ. ಒಂದು ದಿನ ಅದಕ್ಕೆ ಫಲ ಸಿಗಲಿದೆ. ನಾನು ಅದಕ್ಕಾಗಿ ಕಾಯುತ್ತಿದ್ದೇನೆಂದು ತಿಳಿಸಿದರು.

ಸಹೋದರ ಡಿಕೆ.ಸುರೇಶ್ ಸೋಲು ಕುರಿತು ಮಾತನಾಡಿ, ನಾನು ಯಾವತ್ತು ನನ್ನ ತಮ್ಮ (ಡಿ.ಕೆ ಸುರೇಶ್) ಲೋಕಸಭೆ ಚುನಾವಣೆಯಲ್ಲಿ ಸೋಲುತ್ತಾರೆ ಅಂದುಕೊಂಡಿರಲಿಲ್ಲ. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್​ನಿಂದ ನನ್ನ ತಮ್ಮ ಒಬ್ಬರೇ ಗೆಲುವು ಸಾಧಿಸಿದ್ದರು. ಬಹಳಷ್ಟು ಷಡ್ಯಂತ್ರವಾಗಿತ್ತು, ಹಣ ಹಂಚಲಾಗಿತ್ತು. ಕೊನೆಗೆ ನಾವು ಫಲಿತಾಂಶ ಒಪ್ಪಿಕೊಳ್ಳಬೇಕಾಯಿತು, ಒಪ್ಪಿಕೊಂಡೆವು. ನನಗೆ ಇನ್ನೂ ತಮ್ಮನ ಸೋಲನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ. ನನಗೆ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಅನುಮಾನವಿದೆ ಎಂದು ಹೇಳಿದರು.

ಉಪಚುನಾವಣೆ ಗೆಲುವು ಕುರಿತು ಮಾತನಾಡಿ, ಚನ್ನಪಟ್ಟಣ ಕ್ಷೇತ್ರ ಖಾಲಿಯಾದ ಮೊದಲ ದಿನದಿಂದ ಕೆಲಸ ಮಾಡಿದ್ದೇನೆ. ನನಗೆ ಚುನಾವಣೆ ಮಾಡೋದು ಗೊತ್ತಿದೆ. ನಾನು ನಿರಂತರವಾಗಿ 8 ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಕುಮಾರಸ್ವಾಮಿ 8 ಬಾರಿ ಚುನಾವಣೆಗೂ ಸ್ಪರ್ಧಿಸಿಲ್ಲ. ಚನ್ನಪಟ್ಟಣ ಗೆಲುವಿನಲ್ಲಿ ನನ್ನದೇ ತಂತ್ರಗಾರಿಕೆ ಮಾಡಿದೆ, ಜನ ಕೈಹಿಡಿದಿದ್ದಾರೆ. ಅದು ಒಕ್ಕಲಿಗರ ಕ್ಷೇತ್ರವಾಗಿದ್ದರೂ ನಾನು ಯಾವತ್ತೂ ಒಕ್ಕಲಿಗ ನಾಯಕ ಅಂತ ಹೇಳಿಕೊಂಡಿಲ್ಲ. ಆರಂಭದಲ್ಲಿ ನನ್ನ ತಮ್ಮ ಡಿ.ಕೆ.ಸುರೇಶ್​​ಗೆ ಚನ್ನಪಟ್ಟಣ ಚುನಾವಣೆಯಲ್ಲಿ ನಿಲ್ಲಿಸಲು ಒತ್ತಡ ಬಂದಿತ್ತು. ಸಿಎಂ ಸಿದ್ದರಾಮಯ್ಯ ಕೂಡ ಚುನಾವಣೆಯಲ್ಲಿ ಡಿ.ಕೆ ಸುರೇಶ್ ಅವರನ್ನು ನಿಲ್ಲಿಸಲು ಹೇಳಿದ್ದರು. ಜೊತೆಗೆ ಬಹಳಷ್ಟು ನಾಯಕರು ಒತ್ತಾಯ ಮಾಡಿದರು. ಆದರೆ, ನಾನು ಪಕ್ಷ ಮೊದಲು, ಕುಟುಂಬ ನಂತರ ಎಂದು ಹೇಳಿದೆ ಎಂದರು.