ಮನೆ ಕಾನೂನು ಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ಮಸೀದಿ ಪ್ರಕರಣ: ಮಾಧ್ಯಮಗಳಿಗೆ ಸಂಯಮದಿಂದ ವರ್ತಿಸುವಂತೆ ಅಲಾಹಾಬಾದ್ ಹೈಕೋರ್ಟ್ ಸಲಹೆ

ಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ಮಸೀದಿ ಪ್ರಕರಣ: ಮಾಧ್ಯಮಗಳಿಗೆ ಸಂಯಮದಿಂದ ವರ್ತಿಸುವಂತೆ ಅಲಾಹಾಬಾದ್ ಹೈಕೋರ್ಟ್ ಸಲಹೆ

0

ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗಳನ್ನು ವರದಿ ಮಾಡುವಾಗ ಎಚ್ಚರಿಕೆ ವಹಿಸುವಂತೆ ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಪತ್ರಕರ್ತರಿಗೆ ಕಿವಿಮಾತು ಹೇಳಿದೆ.

Join Our Whatsapp Group

ಪ್ರಕರಣದ ಆದೇಶ ಅಥವಾ ವಿಚಾರಣಾ ಪ್ರಕ್ರಿಯೆಯನ್ನು ಬೇಜವಾಬ್ದಾರಿ ಅಥವಾ ಸುಳ್ಳೇ ವರದಿ ಮಾಡುವುದು ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆಯಾಗಬಹುದು ಎಂದು ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

 “…ಪ್ರಕರಣದ ಪ್ರಕ್ರಿಯೆಗಳನ್ನು ವರದಿ ಮಾಡುವಾಗ ಮಾಧ್ಯಮಗಳು ಸೂಕ್ತ ಸಂಯಮ ಪಾಲಿಸುತ್ತವೆ, ಈ ನಿಟ್ಟಿನಲ್ಲಿ ನ್ಯಾಯಾಲಯದ ಆದೇಶದ ಘನತೆ ಮತ್ತು ಪಾವಿತ್ರ್ಯತೆಯನ್ನ ಅವು ಕಾಪಾಡುತ್ತವೆ ಎಂದು ನ್ಯಾಯಾಲಯ ನಿರೀಕ್ಷಿಸುತ್ತದೆ” ಎಂಬುದಾಗಿ ಅದು ಹೇಳಿದೆ.

ನ್ಯಾಯಾಲಯದ ಕಲಾಪಗಳ ಮತ್ತು ಪ್ರಕರಣದಲ್ಲಿ ನೀಡಲಾದ ಆದೇಶಗಳ ಪಾವಿತ್ರ್ಯ ಎತ್ತಿ ಹಿಡಿಯಲು ಇದು ಅವಶ್ಯಕ ಎಂದು ಏಕಸದಸ್ಯ ಪೀಠ ತಿಳಿಸಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ನ್ಯಾಯಿಕ ಸಮುದಾಯ ಮತ್ತು ಪ್ರಕರಣದ ಸುತ್ತ ಇರುವ ಸಾರ್ವಜನಿಕ ಆತಂಕದ ಬಗ್ಗೆ ಕಕ್ಷಿದಾರರಲ್ಲಿ ಒಬ್ಬರನ್ನು ಪ್ರತಿನಿಧಿಸುವ ನ್ಯಾಯವಾದಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿದೆ.

ಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ಮಥುರಾ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಲು ಕೋರಿ ಮೂಲ ದಾವೆಗಳನ್ನು ಸಲ್ಲಿಸಲಾಗಿತ್ತು. ಸಿವಿಲ್‌ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಅರ್ಜಿಗಳನ್ನು ಮೇ 2023ರಲ್ಲಿ, ಹೈಕೋರ್ಟ್ ಖುದ್ದು ತನಗೆ ವರ್ಗಾಯಿಸಿಕೊಂಡಿತ್ತು. ಇಂದು (ಡಿಸೆಂಬರ್ 4) ಪ್ರಕರಣದ ವಿಚಾರಣೆ ಮುಂದುವರೆಯಲಿದೆ.