ಕಲಬುರಗಿ; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದುವರೆ ವರ್ಷವಾದರೂ ಒಂದೇ ಒಂದು ಹೊಸ ಯೋಜನೆ ನೀಡದೇ ಇರುವಾಗ, ಒಂದೇ ಒಂದು ರಸ್ತೆ ಮಾಡದೇ ಇರುವಾಗ ಅದೇಗೆ? ಜನ ಕಲ್ಯಾಣವಾಗುತ್ತೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗಳ ಕುರಿತು ಜಪ ಮಾಡುವ ಸರ್ಕಾರವು ಚುನಾವಣೆ ಬಂದಾಗೊಮ್ಮೆ ಜನರ ಖಾತೆಗೆ ಹಣ ಜಮಾ ಮಾಡಿ ತದನಂತರ ಮರೆತು ಹೋಗಲಾಗುತ್ತದೆ. ಕಳೆದ ಲೋಕಸಭಾ ಚುನಾವಣೆ ಮುಂಚೆ ಹಣ ಹಾಕಲಾಗಿದ್ದರೆ ತದನಂತರ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಜಮಾ ಮಾಡಲಾಯಿತು. ಒಂದು ಅರ್ಥದಲ್ಲಿ ಗ್ಯಾರಂಟಿಗಳನ್ನು ಅವಮಾನ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಅದಲ್ಲದೇ ಆಡಳಿತ ಪಕ್ಷದ ಶಾಸಕರೇ ನಯಾಪೈಸೆ ಅನುದಾನ ಬರುತ್ತಿಲ್ಲ ಎಂದು ಬಹಿರಂಗ ಅಸಮಧಾನ ವ್ಯಕ್ತಪಡಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಪರಿಸ್ಥಿತಿ ಹೀಗಿರುವಾಗ ಜನ ಕಲ್ಯಾಣ ಹೇಗಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಯುವ ನಿಧಿ ಬಗ್ಗೆ ಏನಾಗುತ್ತಿದೆ ಎಂಬುದು ಗೊತ್ತಿಲ್ಲ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಬಸ್ ಇಲ್ಲ. ಒಟ್ಟಾರೆ ಗ್ಯಾರಂಟಿಗಳ ಹೆಸರಿನ ಮೇಲೆ ದುರ್ಬಳಿಕೆ ನಡೆಯುತ್ತಿದೆ ಎಂದು ಟೀಕಿಸಿದ ವಿಜಯೇಂದ್ರ, ಉಪ ಚುನಾವಣೆಯಲ್ಲಿ ಗೆದ್ದ ನಂತರ ಶಕ್ತಿ ಪ್ರದರ್ಶನ ಎನ್ನುವಂತೆ ಸಿಎಂ ಸ್ವಾಭಿಮಾನ ಸಮಾವೇಶ ನಡೆಸಲು ಮುಂದಾಗಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪಕ್ಷ ಅಧಿಕಾರಕ್ಕೆ ಬರುವಲ್ಲಿ ತಮ್ಮದು ಪಾತ್ರವಿದೆ ಎಂದು ಹೇಳಿದ್ದರಿಂದ ಜನ ಕಲ್ಯಾಣ ಸಮಾವೇಶವಾಗಿ ಮಾರ್ಪಾಡಾಯಿತು. ಸಿದ್ಧರಾಮಯ್ಯ ಜತೆಗೆ ಹಲವರ ಪೋಟೋಗಳು ಸೇರಿಕೊಂಡವು. ಒಟ್ಟಾರೆ ಹಾಸನ ಸಮಾವೇಶ ಒಳ ಜಗಳಕ್ಕೆ ಸಾಕ್ಷಿಯಾಗಿದೆ ಎಂದರು.
ನಾಲ್ಕು ಗೋಡೆಯೊಳಗಿನ ಒಪ್ಪಂದ ಶೀಘ್ರ ಬೀದಿಗೆ: ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿದೆ ಎಂದು ಡಿಕೆಶಿ ಹೇಳುತ್ತಾರೆ. ಆದರೆ ಸಿಎಂ ಯವುದೇ ಒಪ್ಪಂದ ಆಗಿಲ್ಲ ಎನ್ನುತ್ತಾರೆ. ಆದರೆ ಬೆಳಗಾಗಿ ಅಧಿವೇಶನ ನಂತರ ನಾಲ್ಕು ಗೋಡೆಯೊಳಗಿನ ಮಾತುಕತೆಯ ಒಪ್ಪಂದ ಬೀದಿಗೆ ಬರಲಿದೆ ಎಂದು ವಿಜಯೇಂದ್ರ ಭವಿಷ್ಯ ನುಡಿದರು.
ಮುಡಾ ಹಗರಣದಲ್ಲಿ ವಾಯಿಟ್ನರ್ದಿಂದ ತಿದ್ದು ಮಾಡಿರುವ ಬಗ್ಗೆ ಒಮ್ಮೆಯೂ ಚಕಾರ ಎತ್ತಿಲ್ಲ. ಇಡಿ ಪ್ರವೇಶಾತಿಯಿಂದ ಎಲ್ಲವೂ ಬಯಲಿಗೆ ಬರುತ್ತಿದೆ. ಆದರೆ ಇದನ್ನು ಸಿಎಂ ನ್ಯಾಯಾಲಯದ ಮೇಲೆ ಪ್ರಭಾವ ಬೀರಲು ನಡೆದಿದೆ ಎನ್ನುತ್ತಾರೆ. ಪ್ರಮಾಣಿಕತೆ ಬರೀ ಬಾಯಿ ಮಾತಲ್ಲಿ ಎಂಬುದು ಎಲ್ಲರಿಗೂ ಈಗ ಗೊತ್ತಾಗಿದೆ. ಅಕ್ರಮ ಬಯಲಿಗೆ ಬಂದು ಎಲ್ಲ ಸತ್ಯ ನಾಡಿನ ಜನತೆಗೆ ಅರಿವು ಆಗುತ್ತದೆ ಎಂದು ಹೇಳಿದರು.
ನಾಲಿಗೆ ಸಂಸ್ಕೃತಿ ತೋರಿಸುತ್ತದೆ: ನನ್ನನ್ನು ಹಿಡಿದು ನಾಲಿಗೆ ನಮ್ಮ ಸಂಸ್ಕೃತಿ ತೋರಿಸುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕುರಿತು ಟೀಕಿಸಿದ ವಿಜಯೇಂದ್ರ, ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಗಟ್ಟಿಗೊಂಡಿದೆ. ಆದರೆ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಮಾತನಾಡುವುದನ್ನು ಯಾರೂ ಸಹಿಸುವುದಿಲ್ಲ. ಭೃಷ್ಟ ಕಾಂಗ್ರೆಸ್ ಸರ್ಕಾರ ವಿರುದ್ದ ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕಿದೆ. ಒಟ್ಟಾಗಿ ಹೋಗಬೇಕೆನ್ನುವುದು ಕಾರ್ಯಕರ್ತರ ಅಭಿಲಾಷೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.














