ಬೆಂಗಳೂರು: ಇತ್ತೀಚೆಗೆ ಚಿನ್ನಾಭರಣ ಪಡೆದು ವಾಪಸ್ ಕೊಡದ ಸ್ನೇಹಿತನ ಹೆಸರನ್ನು ಡೆತ್ನೋಟ್ನಲ್ಲಿ ಬರೆದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ ಪ್ರಕರಣ ಸಂಬಂಧ ರಾಜಾಜಿನಗರ ಪೊಲೀಸರು ಆರೋಪಿ ಯೊಬ್ಬನನ್ನು ಬಂಧಿಸಿದ್ದಾರೆ.
ರಾಜಾಜಿನಗರ ನಿವಾಸಿ ದಿಗಂತ್ ಬಂಧಿತ ಆರೋಪಿ. ನಗರದ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕಾ (19) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಘಟನಾ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ತನ್ನ ಸ್ನೇಹಿತ ದಿಗಂತ್ ಹೆಸರು ಉಲ್ಲೇಖೀಸಿದ್ದಳು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಿಯಾಂಕಾ ಮತ್ತು ದಿಗಂತ್ ಸ್ನೇಹಿತರಾಗಿದ್ದು, ಕೆಲ ತಿಂಗಳ ಹಿಂದೆ ಪ್ರಿಯಾಂಕಾ, ತನ್ನ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಸ್ನೇಹಿತ ದಿಗಂತ್ಗೆ ಕೊಟ್ಟಿದ್ದಳು. ಆದರೆ, ನಿಗದಿತ ಸಮಯದಲ್ಲಿ ಆತ ವಾಪಸ್ ಕೊಟ್ಟಿಲ್ಲ. ಕೇಳಿದಾಗ ಇಲ್ಲದ ಸಬೂಬು ಹೇಳುತ್ತಿದ್ದ. ಅದರಿಂದ ನೊಂದಿದ್ದ ಪ್ರಿಯಾಂಕಾ, ನ.28ರಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ ಸಲಾಗಿತ್ತು. ಬಳಿಕ ಆಕೆಯ ಮೊಬೈಲ್ ಪರಿಶೀಲಿಸಿದಾಗ ಬ್ಯಾಕ್ ಕವರ್ನಲ್ಲಿ ಡೆತ್ನೋಟ್ ಪತ್ತೆಯಾಗಿದೆ. ಅದರಲ್ಲಿ ದಿಗಂತ್ ಎಂಬ ಯುವಕ ಹೆಸರು ಉಲ್ಲೇಖವಾಗಿತ್ತು. ಹೀಗಾಗಿ ಆತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕಾಲೇಜಿನಲ್ಲಿ ಸ್ನೇಹಿತನಾಗಿದ್ದ ದಿಗಂತ್ಗೆ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನೀಡಿದ್ದೆ. ಆತ ಚಿನ್ನ ವಾಪಸ್ ಕೊಡದೆ ಪೀಡಿಸುತ್ತಿದ್ದ. ಮಾನಸಿಕ ಕಿರುಕುಳ ನೀಡುತ್ತಿದ್ದ. ನನ್ನ ಸಾವಿಗೆ ದಿಗಂತ್ ಕಾರಣ’ ಎಂದು ಡೆತ್ನೋಟ್ನಲ್ಲಿ ಉಲ್ಲೇಖೀಸಿದ್ದಾರೆ ಎಂದು ಮೃತ ವಿದ್ಯಾರ್ಥಿನಿಯ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖೀಸಿದ್ದರು.














