ದಾವಣಗೆರೆ: ಸಿದ್ದರಾಮಯ್ಯ ರಾಜಕೀಯದಲ್ಲಿ ಇರುವವರೆಗೂ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಆಗಲು ಬಿಡುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಡಿ.5ರ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಒಪ್ಪಂದ ಆಗಿತ್ತು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಆಗಿಲ್ಲ ಎನ್ನುತ್ತಿದ್ದಾರೆ. ಅದು ಅವರ ಪಕ್ಷದ ಆಂತರಿಕ ವಿಚಾರ. ಬಿಜೆಪಿಗೆ ಸಂಬಂಧವಿಲ್ಲದ ವಿಚಾರ. ಒಂದಂತೂ ನಿಜ ಸಿದ್ದರಾಮಯ್ಯ ರಾಜಕೀಯದಲ್ಲಿ ಇರುವವರೆಗೂ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಆಗಲು ಬಿಡುವುದೇ ಇಲ್ಲ ಎಂದರು.
ಈಗ ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದರಲ್ಲಿ ರಾಜ್ಯದಲ್ಲೇ ನಂಬರ್ ಒನ್ ಆಗಿದ್ದಾರೆ. 2014 ರಲ್ಲಿ ಇದೇ ನನ್ನ ಕೊನೆಯ ಚುನಾವಣೆ ಎಂದರು. 2018 ರಲ್ಲೂ ಇದೇ ನನ್ನ ಕೊನೆಯ ಚುನಾವಣೆ ಎಂದರು. ಈಗ 2024ಕ್ಕೆ ಬಂದಿದ್ದಾರೆ. ಅವರದ್ದು ರಾತ್ರಿ ಮಾತಿನಂತೆ. ರಾತ್ರಿ ಮಾತುಗಳಿಗೆ ಖಾತ್ರಿ… ಇರುವುದಿಲ್ಲ ಎನ್ನುವಂತೆ ಸಿದ್ದರಾಮಯ್ಯ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಯೋಗೇಶ್ವರ್ ಗೆದ್ದರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಎಂದು ಹೇಳುತ್ತಿದ್ದರು. ಆ ಪ್ರಕಾರ ಈಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭ್ರಷ್ಟಾಚಾರದ ಗುಂಡಿ ಮುಚ್ಚಲು ಹಾಸನದಲ್ಲಿ ಸಮಾವೇಶ ಮಾಡಿದ್ದಾರೆ. ಮೂರು ಉಪ ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ಸಮಾವೇಶ ಎಂದಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದಿದ್ದು ಹೇಗೆ ಎಂಬುದು ಗೊತ್ತಿದೆ. ಉಪ ಚುನಾವಣೆಯಲ್ಲಿನ ರಿಸಲ್ಟ್ ನಿಂದ ಸರ್ಕಾರ ಬರೊಲ್ಲ. ಹೋಗೊಲ್ಲ ಎಂದು ಜನರು ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ. ಆದರೆ, ಮೂರು ಉಪ ಚುನಾವಣೆಯಲ್ಲಿನ ಫಲಿತಾಂಶ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಲ್ಲವೇ ಅಲ್ಲ ಎಂದು ಗುಡುಗಿದರು.
ಸಿದ್ದರಾಮಯ್ಯ ಅವರು ಬಿಜೆಪಿಯವರು ಏನೇ ಅಂದರೂ ನಾನು ಜಗ್ಗಲ್ಲ, ಬಗ್ಗಲ್ಲ… ಎಂದಿದ್ದರು. ಹಾಗಾದರೆ ಯಾಕೆ ರಾತ್ರೋರಾತ್ರಿ 14 ಸೈಟ್ ವಾಪಸ್ ಕೊಟ್ಟರು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಈಗ ಹೊಸ ಟ್ರೆಂಡ್ ಪ್ರಾರಂಭವಾಗಿದೆ. ಅಘೋಷಿತ ಕಾನೂನು ಜಾರಿಯಾಗಿದೆ. ಎಷ್ಟು ಬೇಕಾದರೂ ಕದಿಯಿರಿ, ಲೂಟಿ ಮಾಡಿರಿ. ಸಿಕ್ಕಿ ಬಿದ್ದರೆ ವಾಪಸ್ ಕೊಟ್ಟು ಬಿಡಿ. ಅಲ್ಲಿಗೆ ನಿಮ್ ಕೇಸ್ ಕ್ಲೋಸ್ ಎನ್ನುವಂತಹದ್ದಾಗಿದೆ ಎಂದು ದೂರಿದರು.
ಸಿದ್ದರಾಮಯ್ಯ ಅವರಿಗೆ ಕಳ್ಳತನ ಹೊಸದೇನಲ್ಲ. ಕದ್ದಿದ್ದ ಹೂಬ್ಲೆಟ್ ವಾಚ್ ಕಟ್ಟಿಕೊಂಡು ತಿರುಗಾಡುತ್ತಿದ್ದರು. ಯಾರಾದರೂ ಕೇಳಿದರೆ ನಮ್ ಫ್ರೆಂಡ್ ಕೊಟ್ಟಿದ್ದು ಎನ್ನುತ್ತಿದ್ದರು. ಯಾವಾಗ ಅದು ಕದ್ದ ಮಾಲ್… ಎಂಬುದು ಗೊತ್ತಾಯಿತೋ ಸದನದಲ್ಲೇ ವಾಚ್ ಸೆರೆಂಡರ್ ಮಾಡಿದರು. ಇದೊಂದು ಕಳ್ಳ ಸರ್ಕಾರ. ಈಗ ಜನರ ಜಮೀನು ಕದಿಯುವುದಕ್ಕೆ ಬಂದಿದ್ದಾರೆ. ಮುಂದೆ ವಕ್ಫ್ ಬೋರ್ಡ್ ನಿಂದಲೂ ಎನ್ ಓಸಿ(ನಿರಪೇಕ್ಷಣಾ ಪತ್ರ) ತರುವ ಕಾಲವೂ ಬರಬಹುದು. ಇಂತಹ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.