ಕಲಬುರಗಿ: 2013 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಉಗ್ರ ಜುಲ್ಫಿಕರ್ ಸೇರಿದಂತೆ ಒಟ್ಟು ಆರು ಜನ ನಟೋರಿಯಸ್ ಕೈದಿಗಳನ್ನು ರಾಜ್ಯದ ಇತರೆ ಜೈಲುಗಳಿಗೆ ಶಿಫ್ಟ್ ಮಾಡಲು ಸರ್ಕಾರ ಮುಂದಾಗಿದೆ.
ಎನ್ ಐಎ ಕೋರ್ಟ್ ನ ಅನುಮತಿ ಪಡೆದು ಉಗ್ರ ಜುಲ್ಫಿಕರ್ ಶಿಫ್ಟ್, ಶಿವಮೊಗ್ಗ ರೌಡಿ ಶೀಟರ್ ಬಚ್ಚನ್ ಹಾಗೂ ಅಬ್ದುಲ್ ಖಾದರ್ ಜಿಲಾನಿ ಧಾರವಾಡ ಕೇಂದ್ರ ಕಾರಾಗೃಹ, ಶೇಖ್ ಸದಾಂ ಹುಸೇನ್- ಕೇಂದ್ರ ಕಾರಾಗೃಹ ಶಿವಮೊಗ್ಗ, ಜಾಕೀರ್ ತಂದೆ ಹನೀಫ್- ಕೇಂದ್ರ ಕಾರಾಗೃಹ ಶಿವಮೊಗ್ಗ, ವಿಶಾಲ್ ತಂದೆ ವಿಜಯಕುಮಾರ್ ರಾಥೋಡ್ ಕೇಂದ್ರ ಕಾರಾಗೃಹ ಬಳ್ಳಾರಿ ಜೈಲುಗಳಿಗೆ ಎತ್ತಂಗಡಿ ಮಾಡಲಾಗಿದೆ.
ಈ ನಟೋರಿಯಸ್ ಕೈದಿಗಳು ಕಳೆದ ಹಲವು ತಿಂಗಳುಗಳಿಂದ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿ ಇಡೀ ವಾತಾವರಣವನ್ನು ಹಾಳು ಮಾಡಿದ್ದರು ಎನ್ನಲಾಗಿದೆ. ತಮ್ಮ ಸ್ವಹಿತಾ ಶಕ್ತಿಗಾಗಿ ಜೈಲು ಅಧಿಕಾರಿಗಳು ಸೇರಿದಂತೆ ಕೆಲವು ಕೈದಿಗಳನ್ನು ತಮ್ಮ ಹಿತಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಇದರಿಂದಾಗಿ ಜೈಲಿನಲ್ಲಿ ಗುಟ್ಕಾ, ಸಿಗರೇಟ್, ಬೀಡಿ ಸೇರಿದಂತೆ ಇತರೆ ಅಮಲು ಬರಿಸುವಂತಹ ವಸ್ತುಗಳ ಪೂರೈಕೆ ಯಥೇಚ್ಛವಾಗಿ ನಡೆದಿತ್ತು. ಇದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚಿಗೆ ಖುದ್ದು ಜೈಲಿನಲ್ಲಿರುವ ಕೈದಿಗಳೇ ತಮಗೆ ಗುಟುಕ, ಗಾಂಜಾ, ಸಿಗರೇಟ್ ಬೇಕೆಂದು ಪ್ರತಿಭಟನೆ ಮಾಡಿ ಬಾರಿ ಸದ್ದು ಮಾಡಿದ್ದರು.
ಈ ಎಲ್ಲಾ ಅಕ್ರಮಗಳಿಗೆ ಡಾ. ಅನಿತಾ ನೂತನವಾಗಿ ಜೈಲರ್ ಆಗಿ ಬರುವ ಮುಖಾಂತರ ಇಡೀ ಕಲ್ಬುರ್ಗಿ ಕೇಂದ್ರ ಕಾರಾಗೃಹದಲ್ಲಿನ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು.