ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುವ ಸಂಬಂಧ ಬೆಂಗಳೂರಿನ ಕೇಂದ್ರೀಯ ತನಿಖಾ ದಳದ (ಸಿಬಿಐ) ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವರ್ಮಾ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದು, ವರ್ಮಾ ಅವರು ಕೇಂದ್ರ ಸೇವೆಯಲ್ಲಿರುವುದರಿಂದ ಚರ್ಚಿಸಿ ವಿವರಣೆ ನೀಡುವಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಮೌಖಿಕವಾಗಿ ಹೇಳಿದೆ.
ಎಸ್‌ಐಟಿಗೆ ಸಂಬಂಧಿಸಿದಂತೆ ರಾಜ್ಯ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಸಿಬಿಐ ಅಧಿಕಾರಿಯಾಗಿರುವ ವರ್ಮಾ ಅವರನ್ನು ಎಸ್‌ಐಟಿ ನೇತೃತ್ವ ವಹಿಸಲು ಸಿಬಿಐ ಅನುಮತಿಸುವುದೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕು” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿಗೆ ಕೋರಿದರು.
ಆಗ ಪೀಠವು ಸಿಬಿಐ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್ ಅವರನ್ನು ಕುರಿತು “ವಿನಾಯಕ್ ವರ್ಮಾ ಅವರನ್ನು ಎಸ್‌ಐಟಿ ನೇತೃತ್ವ ವಹಿಸುವಂತೆ ಮಾಡಲು ಕೇಂದ್ರ ಸರ್ಕಾರದ ಅನುಮತಿ ಬೇಕಿದೆಯೇ? ಈ ರೀತಿ ಎಸ್‌ಐಟಿಯನ್ನು ಮೊದಲ ಬಾರಿಗೆ ರಚಿಸಲಾಗಿದೆ” ಎಂದಿತು.
ಇದಕ್ಕೆ ಪ್ರಸನ್ನಕುಮಾರ್ ಅವರು “ವಿನಾಯಕ್ ವರ್ಮಾ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡುವಂತೆ ಸೂಚಿಸಿದ್ದೇನೆ. ಇದರಿಂದ ಆಡಳಿತಾತ್ಮಕವಾಗಿ ಹೇಗೆ ನಡೆಯಬೇಕು ಎಂಬುದು ಗೊತ್ತಾಗಲಿದೆ. ಆಡಳಿತಾತ್ಮಕವಾಗಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಭಾವಿಸಿದ್ದೇನೆ. ಏಕೆಂದರೆ ಅಧಿಕಾರಿಗಳು ಭಿನ್ನ ಕೇಡರ್‌ಗೆ ಸೇರಿದವರಾಗಿದ್ದಾರೆ. ಎಲ್ಲಾ ಮಾಹಿತಿ ಪಡೆದು ಪೀಠಕ್ಕೆ ತಿಳಿಸಲಾಗುವುದು” ಎಂದರು.
ಆಗ ಪೀಠವು “ಎಲ್ಲವನ್ನೂ ಚರ್ಚಿಸಿ, ತಿಳಿಸಿ. ಆದೇಶದಲ್ಲಿ ಏನು ಸ್ಪಷ್ಟನೆ ಕೊಡಬೇಕು ಎಂದು ತಿಳಿಸಿದರೆ ಅದನ್ನು ಮಾಡಲಾಗುವುದು” ಎಂದಿತು.
ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ತನಿಖೆಯ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ಮನನೊಂದು ವಕೀಲೆ ಎಸ್ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಬುಧವಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಗಡುವು ವಿಧಿಸಿದೆ. ಈ ಪೈಕಿ ವಿನಾಯಕ್ ವರ್ಮಾ ಅವರು ಸಿಬಿಐನಲ್ಲಿ ಕೆಲಸ ಮಾಡುತ್ತಿದ್ದು,ಕರ್ನಾಟಕ ಗೃಹ ರಕ್ಷಕ ದಳದ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅಕ್ಷಯ್ ಮಚೀಂದ್ರ ಹಾಕೆ, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಎಸ್‌ಐಟಿಯ ಇನ್ನಿಬ್ಬರು ಸದಸ್ಯರಾಗಿದ್ದಾರೆ.