ಬೆಂಗಳೂರು: “ಟಾಕ್ಸಿಕ್’ ಸಿನಿಮಾದ ಚಿತ್ರೀಕರಣಕ್ಕಾಗಿ ಜಾಲಹಳ್ಳಿಯ ಮೀಸಲು ಅರಣ್ಯದಲ್ಲಿ ಗಿಡಗಳನ್ನು ಕಡಿಯಲಾಗಿದೆ ಎಂದು ಆರೋಪಿಸಿ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಮಾನ್ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಎಲ್ಎಲ್ಪಿ ವಿರುದ್ದದ ತನಿಖೆ ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕೆವಿಎನ್ ಮಾನ್ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಎಲ್ಎಲ್ಪಿ ಸಂಸ್ಥೆಯು ತನ್ನ ವಿರುದ್ದ ಆರಣ್ಯ ಇಲಾಖೆ ದಾಖಲಿಸಿರುವ ಎಫ್ಐಆರ್ ಮತ್ತು ಆನಂತರ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಅರ್ಜಿದಾರರ ಪರ ವಾದಿಸಿದ ವಕೀಲ ಬಿಪಿನ್ ಹೆಗ್ಡೆ, ಮೈಸೂರು ಸರ್ಕಾರವು 1963ರಲ್ಲಿ 443 ಎಕರೆ ಭೂಮಿಯನ್ನು ಜಾರಕಬಂಡೆ ಕಾವಲ್ ಮತ್ತು ಪೀಣ್ಯ ಪ್ಲಾಂಟೇಶನ್ನಲ್ಲಿ ಹಿಂದೂಸ್ತಾನ್ ಮಷೀನ್ ಟೂಲ್ಸ್ (ಎಚ್ಎಂಟಿ) ನೀಡಿತ್ತು. ಇದರಲ್ಲಿ ಎಚ್ ಎಂಟಿಯು 18.2 ಎಕರೆ ಜಾಗವನ್ನು ಕೆನರಾ ಬ್ಯಾಂಕ್ ಗೆ ಮಾರಾಟ ಮಾಡಿತ್ತು. ಈ ಜಾಗವನ್ನು ಕೆವಿಎನ್ ಸಂಸ್ಥೆಯು ಭೋಗ್ಯಕ್ಕೆ ಪಡೆದು ನಟ್ ಯಶ್ ಪ್ರಧಾನ ಭೂಮಿಕೆಯಲ್ಲಿರುವ ‘ಟಾಕ್ಸಿಕ್’ ಸಿನಿಮಾದ ಶೂಟಿಗ್ಗೆ ಸೆಟ್ ಹಾಕಿದೆ. ಆದರೆ ಈ ಜಾಗ ಮೀಸಲು ಅರಣ್ಯ ಎಂದು ಅರಣ್ಯ ಇಲಾಖೆ ಎಫ್ ಐಆರ್ ದಾಖಲಿಸಿದೆ ಎಂದು ವಾದಿಸಿದರು.
ಸರ್ಕಾರವೇ ಈಗ ಜಾಲಹಳ್ಳಿ ಅರಣ್ಯವಲ್ಲ ಎಂದು ಹೇಳುತ್ತಿದೆ. ಅಲ್ಲಿ 20ಕ್ಕೂ ಹೆಚ್ಚು ವಸತಿ ಸಮುಚ್ಚಯ, ಆಸ್ಪತ್ರೆ ನಿರ್ಮಾಣವಾಗಿವೆ. ಈ ಪ್ರದೇಶಕ್ಕೆ ಪ್ರತಿವಾದಿಗಳು ಪ್ರವೇಶಿಸುವ ಮುನ್ನ ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ಈ ನ್ಯಾಯಾಲಯವೇ ಸೂಚನೆ ನೀಡಿದ್ದರೂ ಸೆ. 9ರಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸ್ಥಳಕ್ಕೆ ಭೇಟಿ ನೀಡಿ ವಿಡಿಯೊ ತೆಗೆದುಕೊಂಡು ಅದನ್ನು ಟ್ವೀಟ್ ಮಾಡಿದ್ದರು. ಸಿನಿಮಾ ಚಿತ್ರೀಕರಣಕ್ಕೆ ಸೆಟ್ ಹಾಕಲು 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಅರ್ಜಿದಾರರಿಗೆ ಕಿರುಕುಳ ನೀಡಲು ರಾಜಕೀಯ ಪ್ರೇರಿತವಾಗಿ ದೂರು ದಾಖಲಿಸಲಾಗಿದೆ ವಾದಿಸಿದರು.
ರಾಜ್ಯದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ವಾದ ಮಂಡಿಸಿ, ಅಲ್ಲಿದ್ದ ಗಿಡಗಳನ್ನು ಕಡಿದು ಹಾಕಲಾಗಿದೆ ಎಂದು ಪ್ರತಿವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಕೆವಿಎನ್ ಮಾನ್ಸ್ಟಾರ್ ಮೈಂಡ್ ಕ್ರಿಯೇಷನ್ಸ್ ಎಲ್ಎಲ್ಪಿ ಯ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್ 24(ಜಿ) ಅಡಿ ದಾಖಲಿಸಿರುವ ಎಫ್ಐಆರ್ ಸಂಬಂಧದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ವಿಧಿಸಲಾಗಿದೆ ಎಂದು ಆದೇಶಿಸಿತು. ಅಲ್ಲದೇ, ವಿಚಾರಣೆಯನ್ನು 4 ವಾರ ಮುಂದೂಡಿತು.
ಏನಿದು ಪ್ರಕರಣ? ಜಾಲಹಳ್ಳಿಯ ಎಚ್ಎಂಟಿ ಜಾಗವು ಮೀಸಲು ಅರಣ್ಯವಾಗಿದ್ದು, ಅಲ್ಲಿ ನಿಷೇಧವಿದ್ದರೂ ಗಿಡಗಂಟೆ ಹಾಗೂ ಮರಗಳನ್ನು ತೆರವು ಮಾಡಿ “ಟಾಕ್ಸಿಕ್’ ಸಿನಿಮಾದ ಸೆಟ್ ಹಾಕಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲು ಅನುಮತಿಸುವಂತೆ ಕೋರಿ ಅರಣ್ಯ ಇಲಾಖೆಯು ನವೆಂಬರ್ 4ರಂದು ಎಂಟನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ಗೆ ಕೋರಿತ್ತು. ಇದನ್ನು ಪುರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್ ಅವರು ನ. 6ರಂದು ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 24(ಜಿ) ಅಡಿ ಪ್ರಕರಣ ದಾಖಲಿಸಲು ಅನುಮತಿಸಿದ್ದರು. ಇದರ ಅನ್ವಯ ಎಫ್ಐಆರ್ ದಾಖಲಾಗಿ, ತನಿಖೆ ಆರಂಭವಾಗಿತ್ತು. ಈಗ ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ.