ಬೆಂಗಳೂರು (Bengaluru)-ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ಅವರಿಗೆ ಟಿಪ್ಪು ಸುಲ್ತಾನ್ ಮಾತ್ರವಲ್ಲ, ಮತಾಂಧರೆಲ್ಲರೂ ಆಪ್ತರೇ ಎಂದು ಬಿಜೆಪಿ ಟೀಕಿಸಿದೆ.
ಸಿದ್ದರಾಮಯ್ಯ ಅವರನ್ನು ಟೀಕಿಸಿ ನಾಡ ವಿರೋಧಿ ಕಾಂಗ್ರೆಸ್ ಹ್ಯಾಷ್ಟ್ಯಾಗ್ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರಿಗೆ ಟಿಪ್ಪು ಮಾತ್ರವಲ್ಲ, ಮತಾಂಧರೆಲ್ಲರೂ ಆಪ್ತರೇ! ಅಧಿಕಾರದಲ್ಲಿದ್ದಾಗ ಮತಾಂಧ ಸಂಘಟನೆಗಳ ಕಾರ್ಯಕರ್ತರ ಮೇಲಿನ ನೂರಾರು ಕ್ರಿಮಿನಲ್ ಪ್ರಕರಣಗಳನ್ನು ವಾಪಾಸ್ ಪಡೆದಿದ್ದರು. ಮತಾಂಧರೊಂದಿಗೆ ಮತರಾಜಕಾರಣಕ್ಕೆ ಮೀರಿದ ಬೇರೆಯದೇ ಸಂಬಂಧ ಇರಬಹುದೆಂದು ಜನರು ಅನುಮಾನಿಸುತ್ತಿದ್ದಾರೆ ನಿಜವೇ ಎಂದು ಪ್ರಶ್ನಿಸಿದೆ.
ಕರ್ನಾಟಕ ರಾಜ್ಯಕ್ಕೆ ಟಿಪ್ಪು ಕೊಡುಗೆ ಹೆಚ್ಚೋ, ಮೈಸೂರು ಅರಸರ ಕೊಡುಗೆ ಅನನ್ಯವೋ? ಈ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ ಉದಾಹರಣೆ ಇದೆಯೇ? ಕನ್ನಂಬಾಡಿ ಕಟ್ಟೆ ಕಟ್ಟಿಸಿದ ಒಡೆಯರ್ ಕೊಡುಗೆಯನ್ನೇ ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅವರಿಗೆ ಟಿಪ್ಪು ಮಾತ್ರ ಏಕೆ ಆದರ್ಶ ಪುರುಷ ಎಂದು ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ ಕೇಳಿದೆ.
ಸಿದ್ದರಾಮಯ್ಯ ಅವರಿಗೂ ಟಿಪ್ಪು ಸುಲ್ತಾನ್, ಘೋರಿ, ಘಜನಿಗಳಿಗೂ ಇರುವ ಸಂಬಂಧವಾದರೂ ಏನು? ಈ ಮತಾಂಧರು ಎಸಗಿದ ಘೋರ ಕೃತ್ಯಗಳ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ಸಿದ್ದರಾಮಯ್ಯ ಅವರು ಉತ್ತರಿಸುವುದೇಕೆ? ಹಿಂದೂ ನರಮೇಧ ನಡೆಸಿದವರ ಸಮರ್ಥನೆಗೆ ಸಿದ್ದರಾಮಯ್ಯ ಜಿಪಿಎ ಪಡೆದುಕೊಂಡಿದ್ದಾರಾ? ಟಿಪ್ಪುವಿನ ಜೊತೆ ರಹಸ್ಯ ಸಂಬಂಧ ಇದೆಯೇ? ಎಂದು ಪ್ರಶ್ನಿಸಿದೆ.
ಸಿದ್ದರಾಮಯ್ಯನವರೇ, ಸ್ವಯಂ ಸೇವಕರಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳು ನಿಮಗೆ ಉತ್ತರಿಸುತ್ತಿದ್ದಾರೆ. ನಿಮಗೆ ಅದನ್ನೇ ತಡೆದುಕೊಳ್ಳಲಾಗದಿದ್ದರೆ ಹೇಗೆ? ಇದು ರಾಜ್ಯದ ಜನರನ್ನು ಕಾಡುತ್ತಿರುವ ಪ್ರಶ್ನೆ ಹಾಗೂ ಕಾಂಗ್ರೆಸ್ ಮುಚ್ಚಿಟ್ಟ ಕೆಲ ಸತ್ಯಗಳ ಬಗ್ಗೆ ಉತ್ತರ ನೀಡಲು ಸಿದ್ಧರಿದ್ದೀರಾ? ಎಂದಿದೆ.