ಮನೆ ರಾಜ್ಯ ಮಗನ ಸೋಲು ಮುಂದಿಟ್ಟುಕೊಂಡು ಯಾವ ಸಮಾವೇಶ ಮಾಡ್ತಾರೆ?: ಎಚ್‌ ಡಿಕೆಗೆ ಚಲುವರಾಯಸ್ವಾಮಿ ಪ್ರಶ್ನೆ

ಮಗನ ಸೋಲು ಮುಂದಿಟ್ಟುಕೊಂಡು ಯಾವ ಸಮಾವೇಶ ಮಾಡ್ತಾರೆ?: ಎಚ್‌ ಡಿಕೆಗೆ ಚಲುವರಾಯಸ್ವಾಮಿ ಪ್ರಶ್ನೆ

0

ಮೈಸೂರು: ಮಗನ ಸೋಲನ್ನು ಮುಂದಿಟ್ಟುಕೊಂಡು ಯಾವ ಸಮಾವೇಶ ಮಾಡುತ್ತಾರೆ? ಮಂಡ್ಯದಲ್ಲಿ ಜೆಡಿಎಸ್‌ ಸಮಾವೇಶಕ್ಕೆ ಮುಂದಾಗಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕೇಳಿದ್ದು ಹೀಗೆ.

Join Our Whatsapp Group

‘ನಿಖಿಲ್ ಕುಮಾರಸ್ವಾಮಿ ಮೂರು ಬಾರಿ ಸೋಲಲು ಯಾರು ಕಾರಣ? ಅವರ ಸೋಲನ್ನು ಈಗ ಸೆಲೆಬ್ರೇಟ್ ಮಾಡುತ್ತಾರೆಯೇ? ನಿಖಿಲ್ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ಮಂಡ್ಯದಲ್ಲಿ ಎಲ್ಲಿ ಬೇಕಾದರೂ ಸಮಾವೇಶ ನಡೆಸಲಿ ನಮಗೇನು? ಮಗ ಮೂರು ಬಾರಿ ಸೋತಿದ್ದರೂ ಕುಮಾರಸ್ವಾಮಿಗೆ ಸಾಕಾಗಿಲ್ಲ ಅನಿಸುತ್ತದೆ. ನಿಖಿಲ್ ಸೋಲಿಗೆ ತಂದೆಯೇ ಕಾರಣ’ ಎಂದರು.


‘ನಾವು ಚನ್ನಪಟ್ಟಣ ಉಪ ಚುನಾವಣೆಯಲ್ಲಿ 5ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಿದ್ದೆವು. ಆದರೆ, ದೇವೇಗೌಡ ಹಾಗೂ ಕುಮಾರಸ್ವಾಮಿ ನಮ್ಮನ್ನು ಬೈದಿದ್ದರಿಂದ 25ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇವೆ’ ಎಂದು ಹೇಳಿದರು.


‘ನಾನು ಯಾವತ್ತೂ ಕುಮಾರಸ್ವಾಮಿ ಬಗ್ಗೆ ಮಾತನಾಡಿಲ್ಲ. ಅವರು ವೈರಿ ಎಂದು ಹೇಳಿಲ್ಲ. ರಾಜಕೀಯ ವಿಚಾರಗಳ ಹೇಳಿಕೆಗಳಿಗೆ ಉತ್ತರ ಕೊಟ್ಟಿದ್ದೀನಷ್ಟೆ’ ಎಂದು ಹೇಳಿದರು.
‘ಜನರಿಂದ ನಮಗೆ ಬಹುಮತ ಬಂದಿದೆ. ಉತ್ತಮ ಆಡಳಿತ ನೀಡುವುದೇ ನಮ್ಮ ಗುರಿ. 2028ರಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇವೆ. ಮಂಡ್ಯ ಏಳರಲ್ಲಿ ಆರು ಕ್ಷೇತ್ರ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಏಳಕ್ಕೆ ಏಳನ್ನೂ ಗೆಲ್ಲುತ್ತೇವೆ’ ಎಂದರು.


‘ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಅವರ ವರ್ಚಸ್ಸಿನಿಂದ ಗೆದ್ದಿಲ್ಲ. ನರೇಂದ್ರ ಮೋದಿ ವರ್ಚಸ್ಸಿನಿಂದ ಗೆದ್ದಿದ್ದಾರೆ’ ಎಂದು ಟೀಕಿಸಿದರು.
‘ಈ ರಾಜ್ಯ ಸರ್ಕಾರ ಬೀಳುತ್ತದೆ’ ಎಂಬ ಮಾಜಿ ಸಂಸದ ಸಿ.ಎಸ್. ಪುಟ್ಟರಾಜು ಹೇಳಿಕೆ, ‘ಇದೇನು ಕಡ್ಲೆಪುರಿ, ಪಾನಿಪುರಿ ವ್ಯಾಪಾರನಾ? ಅವರ ಮಾತಿಗೆಲ್ಲ ಉತ್ತರಿಸುವುದಿಲ್ಲ’ ಎಂದರು.


‘ನಮ್ಮಲ್ಲಿ ಯಾವುದೇ ಕಿತ್ತಾಟವಿಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಬಣ ಎಂಬುದಿಲ್ಲ. ಮುಖ್ಯಮಂತ್ರಿ ಆಯ್ಕೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು. ವಿರೋಧಪಕ್ಷದವರು ಒಗ್ಗಟ್ಟು ಎಂದರೆ ಏನೆಂಬುದನ್ನು ಕಾಂಗ್ರೆಸ್‌ ನಾಯಕರಿಂದ ಕಲಿಯಲಿ. ಜೆಡಿಎಸ್‌ನವರು ಶಾಸಕ ಜಿ.ಟಿ. ದೇವೇಗೌಡರನ್ನು ಸರಿಪಡಿಸಿಕೊಳ್ಳಲಿ. ಬಿಜೆಪಿಯವರು ಬಸನಗೌಡ ಪಾಟೀಲ ಯತ್ನಾಳ ಮೇಲೆ ಕ್ರಮ ಜರುಗಿಸಲಿ’ ಎಂದು ತಿರುಗೇಟು ನೀಡಿದರು.


‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪು ಒಪ್ಪಿಕೊಳ್ಳಬೇಕು. ಆದರೆ, ಬಿಜೆಪಿ- ಜೆಡಿಎಸ್‌ನವರಿಗೆ ತಾಳ್ಮೆಯೇ ಇಲ್ಲ. ನಮ್ಮ ಸರ್ಕಾರ ಬಂದಾಗಿನಿಂದಲೂ ಅವರು ಮಲಗಿಯೇ ಇಲ್ಲ. ಗ್ಯಾರಂಟಿ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಸರ್ಕಾರ ತೆಗೆಯುತ್ತೇವೆ ಎನ್ನುವುದೇ ಆಗಿದೆ. ದೇವೇಗೌಡರ ಬಾಯಲ್ಲೂ ಆ ಮಾತು ಬಂತಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪಲ್ಲವೇ?’ ಎಂದು ಕೇಳಿದರು.