ನವದೆಹಲಿ: ತುರ್ತು ಸಂದರ್ಭಗಳಲ್ಲಿ ದೂರವಾಣಿ ಸಂದೇಶಗಳನ್ನು ಅಧಿಕೃತವಾಗಿ ಕದ್ದು ವೀಕ್ಷಿಸುವುದಕ್ಕೆ (ಇಂಟರ್ ಸೆಪ್ಟನ್) ಅನುಮತಿ ನೀಡುವ ಅಧಿಕಾರವು ಇನ್ನು ಮುಂದೆ ರಾಜ್ಯ ಮಟ್ಟದಲ್ಲಿ ಇನ್ಸ್ಪೆಕ್ಟರ್ ಜನರಲ್ (ಐಜಿ) ಮತ್ತು ಅದಕ್ಕಿಂತ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಮಾತ್ರ ಇರುತ್ತದೆ.
ಈ ಸಂಬಂಧ ಕೇಂದ್ರ ದೂರಸಂಪರ್ಕ ಇಲಾಖೆ ಹೊಸ ನಿಯಮಗಳನ್ನು ರೂಪಿಸಿ, ‘ದೂರಸಂಪರ್ಕ (ಸಂದೇಶಗಳ ಕಾನೂನುಬದ್ಧ ವೀಕ್ಷಣೆಯ ಕಾರ್ಯವಿಧಾನ ಮತ್ತು ಸುರಕ್ಷತೆ) ನಿಯಮಗಳು- 2024’ ಶೀರ್ಷಿಕೆಯಲ್ಲಿ ಅಧಿಸೂಚನೆ ಹೊರಡಿಸಿದೆ.
ಒಂದು ವೇಳೆ, ಸಂದೇಶ ವೀಕ್ಷಣೆಗೆ ಆದೇಶ ನೀಡಿದ್ದನ್ನು ಏಳು ದಿನಗಳೊಳಗೆ ಸಕ್ಷಮ ಪ್ರಾಧಿಕಾರವು (ಕಾಂಪಿಟೆಂಟ್ ಆಥಾರಿಟಿ) ದೃಢಪಡಿಸದಿದ್ದಲ್ಲಿ, ಆ ಸಂದೇಶಗಳನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ ಮತ್ತು ಅವುಗಳನ್ನು 2 ಕೆಲಸದ ದಿನಗಳ ಒಳಗೆ ನಾಶಪಡಿಸಬೇಕು. ಕೇಂದ್ರ ಸರ್ಕಾರದಲ್ಲಿ ಗೃಹ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಸರ್ಕಾರದಲ್ಲಿ ಗೃಹ ಕಾರ್ಯದರ್ಶಿ ಸಕ್ಷಮ ಪ್ರಾಧಿಕಾರ ಆಗಿರುತ್ತಾರೆ ಎಂದು ಡಿ. 6ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ದುರ್ಗಮ ಪ್ರದೇಶ ಅಥವಾ ಇನ್ಯಾವುದೇ ಕಾರ್ಯಾಚರಣೆ ಸಮಸ್ಯೆಯಿಂದಾಗಿ ರಾಜ್ಯ ಮಟ್ಟದ ಐಜಿ ಮತ್ತು ಅದಕ್ಕಿಂತ ಉನ್ನತ ಹುದ್ದೆಯಲ್ಲಿರುವವರು ಫೋನ್ ಸಂದೇಶಗಳ ವೀಕ್ಷಣೆ (ಫೋನ್ ಇಂಟರ್ಸೆಪ್ಷನ್) ಆದೇಶ ಹೊರಡಿಸಲು ಸಾಧ್ಯವಾಗದಿದ್ದಲ್ಲಿ, ಆ ಆದೇಶವನ್ನು ಕೇಂದ್ರ ಮಟ್ಟದ ಅಧಿಕೃತ ಸಂಸ್ಥೆಯ ಮುಖ್ಯಸ್ಥರು ಅಥವಾ ಎರಡನೇ ಅತ್ಯಂತ ಹಿರಿಯ ಹುದ್ದೆಯಲ್ಲಿ ಇರುವವರು ಹೊರಡಿಸಬಹುದಾಗಿದೆ. ಆದರೆ ಅವರು ರಾಜ್ಯ ಮಟ್ಟದ ಐಜಿ ಹುದ್ದೆಗಿಂತ ಕೆಳಗಿನ ಮಟ್ಟದ ಅಧಿಕಾರಿಯಾಗಿರಬಾರದು ಎಂದು ವಿವರಿಸಲಾಗಿದೆ.
‘ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಇಂತಹ ಆದೇಶವನ್ನು ಕೇಂದ್ರದ ಜಂಟಿ ಕಾರ್ಯದರ್ಶಿಗಿಂತ ಹೆಚ್ಚಿನ ಹುದ್ದೆಯಲ್ಲಿರುವ ಅಧಿಕಾರಿ ಹೊರಡಿಸಬಹುದು. ಆದರೆ ಅದಕ್ಕೆ ಸಕ್ಷಮ ಪ್ರಾಧಿಕಾರವು ಲಿಖಿತ ಅನುಮತಿ ನೀಡಿರಬೇಕು. ಕದ್ದಾಲಿಕೆ ಆದೇಶವನ್ನು ಸಕ್ಷಮ ಪ್ರಾಧಿಕಾರ ದೃಢಪಡಿಸಿದ 7 ದಿನಗಳಲ್ಲಿ ರಾಜ್ಯ ಅಥವಾ ಕೇಂದ್ರ ಮಟ್ಟದ ಪರಿಶೀಲನಾ ಸಮಿತಿಗೆ ಸಲ್ಲಿಸಬೇಕು. ಕೇಂದ್ರ ಮಟ್ಟದಲ್ಲಿ ಈ ಸಮಿತಿಗೆ ಸಂಪುಟ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಕಾನೂನು ಮತ್ತು ದೂರಸಂಪರ್ಕ ಇಲಾಖೆಗಳ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ. ರಾಜ್ಯ ಮಟ್ಟದ ಪರಿಶೀಲನಾ ಸಮಿತಿಯಲ್ಲಿ ಕಾನೂನು ಮತ್ತು ಗೃಹ ಇಲಾಖೆಗಳ ಕಾರ್ಯದರ್ಶಿಗಳಿರುತ್ತಾರೆ.
ಸಕ್ಷಮ ಪ್ರಾಧಿಕಾರ ಯಾವುದೇ ಸಂದೇಶ ಅಥವಾ ಗುಂಪು ಸಂದೇಶಗಳನ್ನು ತಡೆಹಿಡಿಯಲು ನಿರ್ದೇಶಿಸುವ ಆದೇಶ ನೀಡಬಹುದು ಎಂದು ನಿಯಮ ಹೇಳುತ್ತದೆ. ಯಾರ ಸಂದೇಶಗಳನ್ನು ತಡೆಹಿಡಿಯಬೇಕು ಎಂಬ ಬಗ್ಗೆ ಅಧಿಕಾರಿಗಳು ಸೂಕ್ತ ಮಾಹಿತಿ ಹಾಗೂ ಡೇಟಾ ನಾಶದ ಸಮಯದ ವಿವರಗಳನ್ನು ಒದಗಿಸಬೇಕಾಗುತ್ತದೆ. ಅದರ ಯಾವುದೇ ಉದ್ಯೋಗಿಗಳು ಅಕ್ರಮ ಪ್ರತಿಬಂಧಕದಲ್ಲಿ ಭಾಗಿಯಾಗಿರುವುದು ಕಂಡುಬಂದಲ್ಲಿ ದೂರ ಸಂಪರ್ಕ ಸಂಸ್ಥೆಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನಿಯಮದಲ್ಲಿ ತಿಳಿಸಲಾಗಿದೆ. ಈ ವರ್ಷದ ಆ.28ರಂದು ಹೊಸ ನಿಯಮಗಳ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆಗಳನ್ನು ಸರ್ಕಾರ ಆಹ್ವಾನಿಸಿತ್ತು.
ಸಂದೇಶಗಳಿಗೆ ಸಂಬಂಧಿಸಿದ ಈ ಹೊಸ ನಿಯಮಗಳು ಕರೆಗಳ ಅಧಿಕೃತ ಕದ್ದಾಲಿಕೆ (ಕಾಲ್ ಇಂಟರ್ಸೆಪ್ಷನ್) ನಿಯಮಗಳ ಮಾದರಿಯಲ್ಲಿವೆ. ಈ ಹಿಂದೆ ವಿವಿಧ ಸಂಸ್ಥೆಗಳು ಈ ನಿಯಮವನ್ನು ದುರುಪಯೋಗ ಮಾಡಿಕೊಂಡ ಪ್ರಕರಣಗಳು ಇರುವುದರಿಂದ ಈ ನಿಯಮಗಳು ಖಾಸಗಿತನದ ಹಕ್ಕಿನ ಉಲ್ಲಂಘನೆಯ ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆ ಇದೆ. ಗರಿಷ್ಠ 6 ತಿಂಗಳವರೆಗೆ ವ್ಯಕ್ತಿಯ ಸಂದೇಶಗಳನ್ನು ವೀಕ್ಷಿಸಲು ಸಂಸ್ಥೆಗಳಿಗೆ ಅನುಮತಿಸಲಾಗಿದೆ.