‘ನೌಲೀ’ ఎంబ ಪದವು ಯಾವ ನಿಘಂಟಿನಲ್ಲಿಯೂ ದೊರಕುವುದಿಲ್ಲ. ‘ಉಲ್ಲೋಲ’ವೆಂದರೆ ದೊಡ್ಡ ಅಲೆ. ಈ ಪದವು ‘ನೌಲೀ’ಯ ವಿಷಯದಲ್ಲಿ ಸ್ವಲ್ಪಮಟ್ಟಿಗೆ ಸೂಚನೆಯನ್ನು ಕೊಡುತ್ತದೆ. ಏಕೆಂದರೆ ಈ ‘ನೌಲೀ’ ಬಂಧದಲ್ಲಿ ಕಿಬ್ಬೊಟ್ಟೆಯೊಳಗಿನ ಮಾಂಸ ಖಂಡಗಳು ಮತ್ತು ಅಂಗಗಳು ಅಲೆಗಳ ಚಲನೆಗಳಂತೆ ಪಕ್ಕ ಪಕ್ಕಗಳಿಗೂ ಮೇಲಕ್ಕೂ ಚಲಿಸುತ್ತದೆ. ‘ನೌಃ ಎಂಬ ಸಂಸ್ಕೃತ ಪದದ ಅರ್ಥ ದೋಣಿ, ನಾವೆ, ತೆಪ್ಪ, ‘ಲೀ’ ಎಂಬುದು ಅಂಟಿರು, ಮಲಗು, ಮುಸುಕು, ಆವರಿಸು ಎಂಬ ಅರ್ಥಗಳನ್ನು ಕೊಡುತ್ತದೆ. ದೊಡ್ಡ ಬಿರುಗಾಳಿಯ ಪ್ರಭಾವಕ್ಕೆ ಒಳಗಾದ ಸಮುದ್ರದ ಅಲೆಗಳ ಮೇಲಿರುವ ನಾವೆ ಅಥವಾ ದೋಣಿಯ ಚಲನೆಗಳನ್ನು ಈ ನೌಲೀಬಂಧದ ಚಲನೆಗಳು ಹೋಲುತ್ತವೆ. ‘ನೌಲೀ’ ಎಂಬುದು ಒಂದು ಕ್ರಿಯೆ ಅಥವಾ ಒಂದು ಕ್ರಮ ; ಆಸನವಲ್ಲ. ಇದನ್ನಾಚರಿಸುವ ವಿಷಯದಲ್ಲಿ ಸ್ವಲ್ಪ ಎಚ್ಚರಿದಿಂದಿರಬೇಕು. ಇಲ್ಲವಾದಲ್ಲಿ, ಈ ಅಭ್ಯಾಸಕ್ರಮವು ಅನೇಕ ರೋಗಗಳಿಗೆ ಈಡು ಮಾಡಬಹುದು. ಆದುದರಿಂದ ಇದನ್ನು ಸಾಮಾನ್ಯ ಮಟ್ಟದ ಅಭ್ಯಾಸಕನಿಗೆ ಸಲಹೆ ಮಾಡಿಲ್ಲ. ಈ ‘ನೌಲೀ’ ಬಂಧವನ್ನು ಅಭ್ಯಸಿಸುವ ಮುನ್ನ ‘ಉಡ್ಡಿಯಾನ’ ಬಂಧದಲ್ಲಿ ಒಳ್ಳೆಯ ಪರಿಣತಿಯನ್ನು ಪಡೆದಿರಬೇಕು. ಫೇರಂಡಸಂಹಿತೆಯಲ್ಲಿ ‘ಲೌಲುಕೀ’ ಎಂಬ ಹೆಸರಿನಿಂದ ಇದನ್ನು ವಿಶೇಷವಾಗಿ ವರ್ಣಿಸಿದೆ.
ಅಭ್ಯಾಸಕ್ರಮ
೧. ಮೊದಲು, ‘ತಾಡಾಸನ’ದಲ್ಲಿ ನಿಲ್ಲಬೇಕು.
೨. ಬಳಿಕ, ಕಾಲುಗಳನ್ನು ಒಂದಡಿ ಅಂತರವಾಗುವಂತೆ ಅಗಲಿಸಿ, ಮಂಡಿಗಳನ್ನು ಸ್ವಲ್ಪ ಬಾಗಿಸಿ ಮುಂಗಡೆಗೆ ಭಾಗಬೇಕು.
೩. ಆಮೇಲೆ, ಕೈಬೆರಳುಗಳನ್ನು ಆದಷ್ಟು ದೂರ ದೂರವಾಗಿ ಆಗಲಿಸಿ, ಆ ಕೈಗಳನ್ನು ಮಂಡಿಗಳಿಗೆ ಸ್ವಲ್ಪ ಮೇಲ್ಬಾಗದ ತೊಡೆಗಳ ಮೇಲೆ ಊರಿಡಬೇಕು.
೪. ಆನಂತರ ತಲೆಯನ್ನು ತಗ್ಗಿಸಿ ಕತ್ತೆಲುಬುಗಳ (Collar bones) ನಡುವಣ ನಿಮ್ನಸ್ಥಾನದಲ್ಲಿ, ಅಂದರೆ ಎದೆಯೆಲುಬಿನ ಮೇಲ್ಬಾಗದಲ್ಲಿ ಗದ್ದವನ್ನು ಒತ್ತಿಡಬೇಕು.
೫. ಆ ಬಳಿ, ಉಸಿರನ್ನು ಆಳವಾಗಿ ಒಳಕ್ಕೆಳೆದು, ಆಮೇಲೆ ಬಹು ವೇಗದಿಂದ ಶ್ವಾಸಕೋಶಗಳಿಂದ ಒಮ್ಮೆಲೇ ಹೊರದೂಡಬೇಕು.
೬. ಇದಾದಮೇಲೆ ಮತ್ತೆ ಉಸಿರನ್ನು ಒಳಕ್ಕೆಳೆಯದೆಯೆ, ಸ್ವಲ್ಪ ಹೊತ್ತು ಉಸಿರಾಟವನ್ನು ನಿಲ್ಲಿಸಬೇಕು. ಆ ಬಳಿಕ ಕಿಬ್ಬೊಟ್ಟೆಯ ಭಾಗವನ್ನು, ಒಳಕ್ಕೆಳೆಯುವುದರ ಮೂಲಕ ಬೆನ್ನೆಲುಬಿನ ಕಡೆಗೆ ಎಳೆದಿಡಬೇಕು.
೭. ವಸ್ತಿಕುಹರದ ಅಂಚಿಗೂ ಮತ್ತು ತೇಲಾಡುವ ಪಕ್ಕೆಲುಬುಗಳಿಗೂ ನಡುವಣ ಭಾಗವನ್ನು ನಿರ್ವ್ಯಾಪಾರದ ಸ್ಥಿತಿಗೆ ತಂದು, ಅಲ್ಲಿ ಟೊಳ್ಳಿನ ಕುಳಿಯೊಂದನ್ನು ನಿರ್ಮಿಸಬೇಕು. ಅದೇ ಸಮಯದಲ್ಲಿಯೇ ಕಿಬ್ಬೊಟ್ಟೆಯೊಳಗಿನ ಗುದನಾಳಗಳನ್ನು ಮುಂಗಡೆಗೆಸ ನುಕಿಡಬೇಕು.
೮. ಈ ಸ್ಥಿತಿಯಲ್ಲಿ ಸುಮಾರು ೩ ರಿಂದ ೧೦ ಸೆಕೆಂಡುಗಳ ಕಾಲ, ಅಭ್ಯಾಸಕನ ಶಕ್ತಿಗೆ ತಕ್ಕಂತೆ
೯. ಈಗ ಕಿಬ್ಬೊಟ್ಟೆಯೊಳಗಿನ ಗುದನಾಳಗಳ ಮೇಲಣ ಬಿಗಿತವನ್ನು ಸಡಿಲಿಸಿ, ಆ ಬಳಿಕ ಈ ಅಭ್ಯಾಸಕ್ರಮದಲ್ಲಿ ವಿವರಿಸಿರುವ ೬ನೆಯ ಸ್ಥಿತಿಗೆ ಮತ್ತೆ ಹಿಂದಿರುಗಬೇಕು.
೧೦. ತರುವಾಯ, ಕಿಬ್ಬೊಟ್ಟೆಗೆ ವಿಶ್ರಾಂತಿ ಕೊಟ್ಟು ಮೆಲ್ಲಗೆ ಉಸಿರನ್ನು ಒಳಕ್ಕೆಳೆದು ಕೊಳ್ಳಬೇಕು.
೧೧. ಆಮೇಲೆ, ಕೆಲವು ಸಲ ಉಸಿರಾಟ ನಡೆಸಿ, ಅನಂತರ ೧ ರಿಂದ ೧೦ರವರೆಗಿನ ಮೇಲೆ ವಿವರಿಸಿರುವ ಅಭ್ಯಾಸಕ್ರಮದ ಚಕ್ರವನ್ನನುಸರಿಸಿ, 24 ಗಂಟೆಗಳೊಳಗೆ ಒಂದು ಸಲ ಈ ಬಂಧ ಅಥವಾ ಕ್ರಿಯೆಯನ್ನು ಎಡೆಬಿಡದೆ ಆರರಿಂದ ಎಂಟು ಆವರ್ತಿ ಮಾಡಬೇಕು.
03 ಈ ‘ನೌಲೀಬಂಧ’ವನ್ನು ಅಭ್ಯಸಿಸಬೇಕಾದರೆ, ಮಲಮೂತ್ರವಿಸರ್ಜನೆಯನ್ನು ಮಾಡಿ ಬರಿಹೊಟ್ಟೆಯಲ್ಲಿರಬೇಕು.
ಪರಿಣಾಮಗಳು
ಈ ‘ನೌಲೀಬಂಧ’ದ ಅಭ್ಯಾಸದಿಂದ ಕಿಬ್ಬೊಟ್ಟೆಯೊಳಗಿನ ಗುದನಾಳಗಳು ಬಲಗೊಳ್ಳುವವು. ಇದರ ಪರಿಣಾಮಗಳು ‘ಉಡ್ಡಿಯಾನಬಂಧ’ದ ಪರಿಣಾಮಗಳನ್ನೇ ಹೋಲುತ್ತವೆ.