“ಕಳೆದ 29 ದಿನಗಳಲ್ಲಿ 7,500 ಮೆಮೊಗಳ ಪೈಕಿ 5,500 ಮೆಮೊಗಳನ್ನು ವಿಚಾರಣೆಗೆ ಪಟ್ಟಿ ಮಾಡಿದ್ದೇನೆ. ಇನ್ನೂ ಎಷ್ಟು ಮೆಮೊಗಳನ್ನು ಸ್ವೀಕರಿಸಲಿ? ನಾನು ಮನುಷ್ಯ. ಹಸುವಿನ ಕೆಚ್ಚಲಿನಲ್ಲಿ ರಕ್ತ ಬರುವವರೆಗೆ ನೀವು ಹಾಲು ಕರೆಯಲಾಗದು” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದರು.
“ಕಳೆದ 29 ದಿನಗಳಲ್ಲಿ 7,500 ಮೆಮೊ ಸಲ್ಲಿಕೆಯಾಗಿವೆ. ನಾನು 5,500 ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಿದ್ದೇನೆ. ಇದನ್ನೂ ಮೀರಿ ಏನನ್ನು ಪಟ್ಟಿ ಮಾಡಲಾಗುತ್ತದೆ? ನಾನೂ ಮನುಷ್ಯ. ಎಷ್ಟು ಪ್ರಕರಣಗಳನ್ನು ಪಟ್ಟಿ ಮಾಡಬೇಕು, ಎಷ್ಟನ್ನು ವಿಚಾರಣೆಗ ಪಟ್ಟಿ ಮಾಡಬೇಕು ಹೇಳಿ? ಹಸುವಿನ ಕೆಚ್ಚಲಿನಲ್ಲಿ ರಕ್ತ ಬರುವವರೆಗೆ ಹಾಲು ಕರೆಯಲಾಗದು” ಎಂದು ತಮ್ಮ ಮೇಲಿನ ಒತ್ತಡಕ್ಕೆ ಅಸಹಾಯಕತೆ ವ್ಯಕ್ತಪಡಿಸಿದರು.
ಸಾಮಾನ್ಯ ಪ್ರಕರಣಗಳನ್ನು ವಿಚಾರಣೆ ನಡೆಸುವ ಪೀಠದ ಹೊಣೆಯನ್ನು ನ್ಯಾ. ಎಂ ನಾಗಪ್ರಸನ್ನ ಅವರು ಹೊತ್ತಿರುವುದರಿಂದ ತುರ್ತು ಪರಿಹಾರದ ಅರ್ಜಿಗಳು ಅವರ ಮುಂದೆ ಯಥೇಚ್ಛವಾಗಿ ಸಲ್ಲಿಕೆಯಾಗುತ್ತವೆ. ಇದರೊಂದಿಗೆ ಪೂರ್ವನಿಗದಿಯಾಗಿರುವ ಪ್ರಕರಣಗಳನ್ನು ನ್ಯಾಯಮೂರ್ತಿಗಳು ನಡೆಸಬೇಕು. ಅಲ್ಲದೇ, ಪ್ರತಿದಿನ ತೀರ ಅತ್ಯಗತ್ಯ ಪರಿಹಾರದ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿ ವಕೀಲರು ಮೆಮೊ ಸಲ್ಲಿಕೆ ಮಾಡುತ್ತಾರೆ. ಪ್ರತಿದಿನ ಮೆಮೊ ಸ್ವೀಕರಿಸುವುದಕ್ಕೆ ನ್ಯಾ. ನಾಗಪ್ರಸನ್ನ ಅವರು ಕಲಾಪ ಆರಂಭದ ಅರ್ಧ ತಾಸನ್ನು ಅದಕ್ಕೆ ವಿನಿಯೋಗಿಸುವಂತಾಗಿದೆ. ಇದೆಲ್ಲದರ ನಡುವೆಯೂ ಪ್ರಕರಣಗಳ ವಿಲೇವಾರಿ ವಿಚಾರದಲ್ಲಿಯೂ ಅಸಾಧಾರಣ ವೇಗವನ್ನು ಅವರು ಕಾಯ್ದುಕೊಂಡಿದ್ದಾರೆ.