ಮನೆ ಯೋಗಾಸನ ಪ್ರಾಣಾಯಾಮಗಳು

ಪ್ರಾಣಾಯಾಮಗಳು

0

 ಸೂಚನೆಗಳು ಮತ್ತು ಮುನ್ನೆಚರಿಕೆಗಳು

(ಸೂಚನೆ : ಇನ್ನು ಮುಂದೆ ವಿವರಿಸಲಿರುವ ‘ಪ್ರಾಣಾಯಾಮ’ದ ಅಭ್ಯಾಸಕ್ರಮವನ್ನು ಅನುಸರಿಸುವ ಮುನ್ನ ಈ ಕೆಳಗಿನ ಸೂಚನೆಗಳನ್ನೂ ಮತ್ತು ಮುನ್ನೆಚ್ಚರಿಕೆಗಳನ್ನೂ ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕಾದುದು ಅತ್ಯಾವಶ್ಯಕ.)

Join Our Whatsapp Group

ಅಭ್ಯಾಸಕ್ಕೆ ತಕ್ಕ ಯೋಗ್ಯತಾಗುಣಗಳು :

೧. ಪದವೀಧರನು ಅಲ್ಲಿಂದ ಮುಂದಕ್ಕೆ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡಿ ಯಾವುದಾದರೂ ವಿಷಯದಲ್ಲಿ ಹೆಚ್ಚಿನ ಅನುಭವವನ್ನು ಗಳಿಸಿದರೆ, ತಾನು ಹಿಂದೆ ಪದವಿ ವ್ಯಾಸಂಗದ ಅವಧಿಯಲ್ಲಿ ಕಲಿತುದರಲ್ಲಿ ಸಂಪೂರ್ಣಜ್ಞಾನವನ್ನು ಹೊಂದಿರಬೇಕಾದುದು ಹೇಗೆ ಅವಶ್ಯಕವೋ, ಅದರಂತೆಯೇ ಪ್ರಾಣಾಯಾಮಾಭ್ಯಾಸಕ್ಕೆ ಅದಕ್ಕೆ ತಕ್ಕ ಆಸನಾಭ್ಯಾಸದಲ್ಲಿ ಪರಿಣತಿಯನ್ನೂ ಮತ್ತು ಅದರಲ್ಲಿರಬೇಕಾದ ಶಿಸ್ತನ್ನೂ ಅಭ್ಯಾಸಿಯು ಅಳವಡಿಸಿಕೊಂಡಿರಲೇಬೇಕು.

೨. ಪ್ರಾಣಾಯಾಮಾಭ್ಯಾಸಕ್ಕೆ ತೊಡಗಲು ಮತ್ತು ಆ ಹಾದಿಯಲ್ಲಿ ಮುಂದುವರಿಯಲು ಬಯಸುವವನ ಯೋಗ್ಯತೆಯನ್ನು ಈ ವಿದ್ಯೆಯಲ್ಲಿ ಚೆನ್ನಾಗಿ ನುರಿತ ಗುರುವು ಚೆನ್ನಾಗಿ ಪರೀಕ್ಷಿಸಿದ ಮೇಲೆಯೇ ಮತ್ತು ಆತನ ನೇತೃತ್ವದಲ್ಲಿಯೇ ಅದನ್ನು ಕೈಗೊಳ್ಳಬೇಕು.

೩. ವಾಯುಪ್ರಚಲಿತಯಂತ್ರಗಳು ಎಂಥ ಕಠಿಣವಾದ ಶಿಲೆಯನ್ನಾದರೂ ಛೇದಿಸುವ ಶಕ್ತಿಯನ್ನು ಹೊಂದಿರುತ್ತವೆ. ಅದರಂತೆ ಪ್ರಾಣಾಯಾಮಕ್ರಮದಲ್ಲಿ ಯೋಗಿಯು ತನ್ನ ಶಾಸಕೋಶ ಗಳನ್ನೇ (ಉಸಿರಿನ ಚೀಲಗಳನ್ನೇ) ವಾಯುಯಂತ್ರಗಳನ್ನಾಗಿ ಉಪಯೋಗಮಾಡುತ್ತಾನೆ. ಇವುಗಳನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸದಿದ್ದರೆ, ಅವು ಆ ಯಂತ್ರಸಾಧನೆಗಳನ್ನೂ ಮತ್ತು ಸಾಧನಕನನ್ನೂ ನಾಶಪಡಿಸುವುದು ನಿಶ್ಚಯ. ಈ ತತ್ತವು ಪ್ರಾಣಾಯಾಮಕ್ಕೂ ಅನ್ವಯಿಸುತ್ತದೆ.

೪. ನೈರ್ಮಲ್ಯ ಮತ್ತು ಆಹಾರ : ದೈವಭಕ್ತನು ಅಶುಚಿಯಾದ ದೇಹ ಮತ್ತು ಮನಸ್ಸಿನಿಂದ ಕೂಡಿ ದೇವಸ್ಥಾನಕ್ಕೆ ಹೇಗೆ ಹೋಗಬಾರದೋ, ಅದರಂತೆಯೇ ಯೋಗಿಯಾದವನು ತನ್ನ ದೇಹವೆಂಬ ದೇವಾಲಯವನ್ನು ಪ್ರವೇಶಿಸುವ ಮುನ್ನ ಶೌಚನಿಯಮಗಳನ್ನು ಚೆನ್ನಾಗಿ ಅನುಸರಿಸುತ್ತಾನೆ.

೫. ಪ್ರಾಣಾಯಾಮಾಭ್ಯಾಸಕ್ಕೆ ತೊಡಗುವ ಮುನ್ನ ಮಲಮೂತ್ರಕೋಶಗಳನ್ನು ಬರಿದು ಮಾಡಿರಬೇಕು. ಈ ಸ್ಥಿತಿಯು ಆಸನಗಳಲ್ಲಿ ಮತ್ತು ಬಂಧಗಳಲ್ಲಿ ಸುಖದಿಂದ ನೆಲೆಸಲು ಹಾದಿ ರುತ್ತದೆ.

೬. ಪ್ರಾಣಾಯಾಮಾಭ್ಯಾಸವನ್ನು ಬರಿಹೊಟ್ಟೆಯಲ್ಲಿರುವಾಗ ಕೈಗೊಳ್ಳುವುದು ಒಳ್ಳೆಯದು. ಅಭ್ಯಾಸಿಗೆ ಇದು ಕಷ್ಟವೆಂದು ತೋರುವುದಾದರೆ ಆತನು ಒಂದು ಲೋಟ ಹಾಲು, ಕಾಫಿ, ಟೀ ಇಲ್ಲವೆ ಕೋಕೋ ಎಂಬ ಯಾವುದಾದರೂ ದ್ರವರೂಪದ ಆಹಾರವನ್ನು ಸೇವಿಸಬಹುದು.ಊಟ ಮಾಡಿದ ಮೇಲೆ ಕಡೆಯ ಪಕ್ಷ ಆರು ಗಂಟೆಗಳನ್ನಾದರೂ ಕಳೆದಮೇಲೆಯೇ ಪ್ರಾಣಾಯಾಮಭ್ಯಾಸಕ್ಕೆ ಕೊಡಬೇಕು.

೭. ಈ ಪಣಯಾಮಾಭಾಸವನ್ನು ಮುಗಿಸಿದ ಸುಮಾರು ಅರ್ಧತಾಸಿನ ಮೇಲೆ ಹಗುರವಾದ ಆಹಾರವನ್ನು ಅಭ್ಯಾಸಿಯು ಸೇವಿಸಬಹುದು.

೮. ಕಾಲ ಮತ್ತು ಸ್ಥಳ ಪ್ರಾತಃಕಾಲ ಸೂರ್ಯೋದಯದ ಮುನ್ನ, ಸಾಯಂಕಾಲ ಸೂರ್ಯಾಸ್ತಮಯದ ಬಳಿಕ (ಸಂಜೆ) ಪ್ರಾಣಾಯಾಮಾಭ್ಯಾಸಕ್ಕೆ ಅತ್ಯುತ್ತಮವಾದ ಕಾಲ ‘ಪಠ ಯೋಗ ಪ್ರದೀಪಿಕೆ’ಯ ಪ್ರಕಾರ, ಪ್ರಾಣಾಯಾಮಾಭ್ಯಾಸವನ್ನು ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮಧ್ಯರಾತ್ರಿ- ಹೀಗೆ ನಾಲ್ಕು ಸಲ ೮೦ ಶ್ವಾಸಚಕ್ರದಂತೆ ನಡೆಸಬೇಕು.

 ಪ್ರಾತರ್ಮಧ್ಯಂದಿನೇ ಸಾಯಂ ಅರ್ಧರಾತ್ರೇ ಚ ಕುಂಭಕಾನ್ ।

 *ಶನೈರಶೀತಿಪರ್ಯಂತಂ ಚತುರ್ವಾರಂ ಸಮಭ್ಯಸೇತ್ ।

– ಹಠಯೋಗಪ್ರದೀಪಿಕೆ, ದ್ವಿತೀಯೋಪದೇಶ, ೧೧

ಅಭ್ಯಾಸಿಯು ರೇಚಕ – ಪೂರಕ – ಕುಂಭಕಗಳಿಂದ ಕೂಡಿದ ಪ್ರಾಣಾಯಾಮಚಕ್ರಗಳನ್ನು ಪ್ರತಿದಿನವೂ ಪ್ರತಿಸಲ ಎಂಬತ್ತರಂತೆ ಪ್ರಾತಃಕಾಲ, ಅಂದರೆ ಅರುಣೋದಯಕ್ಕೂ ಸೂರ್ಯೋ ದಯಕ್ಕೂ ಮಧ್ಯದಲ್ಲಿನ ಮೂರು ಘಳಿಗೆಗಳು, ಮಧ್ಯಾಹ್ನ(ದಿನವನ್ನು ಐದು ಭಾಗಗಳಾಗಿ ವಿಂಗಡಿಸಿ, ಅದರ ಮೂರನೇ ಭಾಗದಲ್ಲಿ), ಸಾಯಂಕಾಲ (ಸೂರ್ಯಾಸ್ತವಾದ ಮೂರು ಘಳಿಗೆಗಳ ಕಾಲ, ಅಂದರೆ ಸಂಧ್ಯಾಕಾಲ), ಮತ್ತು ಅರ್ಧ ರಾತ್ರಿ (ಮಧ್ಯರಾತ್ರಿಯ ಮುಹೂರ್ತ ದ್ವಯ) ಈ ನಾಲ್ಕು ವೇಳೆಗಳಲ್ಲಿ ಅಭ್ಯಸಿಸಬೇಕು. ಆದರೆ ಕಾಲಾವಕಾಶವು ದೊರಕದಿರುವ ಈ ಆಧುನಿಕ ನಾಗರಿಕತೆಯ ಕಾಲದಲ್ಲಿ ಈ ಸಲಹೆಯಂತೆ ನಡೆಸುವುದು ಕಷ್ಟ, ಆದುದರಿಂದ ಮುಂಜಾನೆ ಮತ್ತು ಸಂಜೆಗಳಲ್ಲಿ ದಿನಕ್ಕೆ ಒಟ್ಟು ೧೫ ನಿಮಿಷಗಳಂತೆ ಪ್ರಾಣಾಯಾಮವನ್ನು ಅಭ್ಯಾಸಮಾಡಬೇಕೆಂದು ಸಲಹೆ ನೀಡಲಾಗಿದೆ. ‘ಹಠಯೋಗಪ್ರದೀಪಿಕೆ’ಯಲ್ಲಿ ಸಲಹೆ ಮಾಡಿರುವ ರ೦ ಸಲ ಪ್ರಾಣಾಯಾಮ ಚಕ್ರವನ್ನು ಅಭ್ಯಸಿಸುವುದು, ಈ ಅಭ್ಯಾಸದಲ್ಲಿ ಚೆನ್ನಾಗಿ ನುರಿತವರಿಗಾಗಿ ಮತ್ತು ಅದಕ್ಕೆ ಮೈಗೊಟ್ಟ ಯೋಗಿಗಳಿಗೇ ವಿನಾ ಇದು ಸಾಮಾನ್ಯ ಗೃಹಸ್ಯನಿಗಲ್ಲ ಎಂದು ಗ್ರಹಿಸಬೇಕು.

೯. ಪ್ರಾಣಾಯಾಮಾಭ್ಯಾಸವನ್ನು ಪ್ರಾರಂಭಿಸುವುದಕ್ಕೆ ಹವಾಗುಣದಲ್ಲಿ ಏರುಪೇರು ಗಳಾಗದ ಸಮಸ್ಥಿತಿಯಲ್ಲಿರತಕ್ಕ ವಸಂತಕಾಲ ಇಲ್ಲವೆ ಶರತ್ಕಾಲ ಅತ್ಯುತ್ತಮ.

೧೦. ಈ ಪ್ರಾಣಾಯಾಮವನ್ನು ನಿರ್ಮಲವಾದ ಚೆನ್ನಾಗಿ ಗಾಳಿಯಾಡುವ, ಹುಳು ಹುಪ್ಪಟಗಳಿಲ್ಲದ ಸ್ಥಳದಲ್ಲಿ ಅಭ್ಯಸಿಸಬೇಕು. ಅಲ್ಲದೆ ಶಬ್ದವು ಶಾಂತಿಗೆ ಭಂಗತರುವುದರಿಂದ ನಿಶ್ಯಬ್ದವಾದ ಸ್ಥಳದಲ್ಲಿ ಇದನ್ನು ಆಚರಿಸಬೇಕು.

೧೧. ಪ್ರಾಣಾಯಾಮವನ್ನು ಮನೋದಾರ್ಡ್ಯದಿಂದ ಕ್ರಮಬದ್ಧವಾಗಿ ಪ್ರತಿದಿನವೂ ಗೊತ್ತಾದ (ನಿರ್ದಿಷ್ಟ) ಕಾಲದಲ್ಲಿ ನಿರ್ದಿಷ್ಟ ಸ್ಥಾನದಲ್ಲಿ ಮತ್ತು ನಿರ್ದಿಷ್ಟವಾದ ಭಂಗಿಯಲ್ಲಿ ನೆಲೆಸಿ ಆಚರಿಸಬೇಕು. ಆದರೆ ಬೇರೆ ಬೇರೆ ವಿಧವಾದ ಪ್ರಾಣಾಯಾಮಗಳನ್ನು ಅಭ್ಯಸಿಸಬೇಕಾದ ಸಂದರ್ಭದಲ್ಲಿ ಮಾತ್ರ ಕಾಲ, ಸ್ಥಾನ, ಭಂಗಿಗಳಲ್ಲಿ ವ್ಯತ್ಯಾಸ ಮಾಡಬಹುದು. ಉದಾಹರಣೆಗೆ :ಸೂರ್ಯಭೇದನ’ ಪ್ರಾಣಾಯಾಮವನ್ನು ಒಂದು ದಿನ ಆಚರಿಸಿದರೆ ಮಾರನೆಯ ದಿನ ‘ಭಸ್ತ್ರಿಕಾ ಪ್ರಾಣಾಯಾಮ’ನ್ನೂ ಕೈಗೊಳ್ಳಬಹುದು ಆದರೆ ‘ನಾಡೀ ಶೋಧದ ಪ್ರಾಣಾಯಾಮ’ವನ್ನು ಪ್ರತಿ ನಿತ್ಯವೂ ಆಚರಿಸಲೇಬೇಕು.