ಚಿತ್ರದುರ್ಗ: ನಗರದ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಬಾಣಂತಿ ಸಾವನ್ನಪ್ಪಿದ್ದು, ಅದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕೆಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕು ಜಾಗನೂರಹಟ್ಟಿ ಗ್ರಾಮದ ರೋಜಮ್ಮ(25) ಮೃತ ಬಾಣಂತಿ. ಜಿಲ್ಲಾಸ್ಪತ್ರೆ ವೈದ್ಯೆ ಡಾ.ರೂಪಶ್ರೀ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು.
ಹೆರಿಗೆ ನಂತರ ರೋಜಮ್ಮ ಮನೆಗೆ ತೆರಳಿದ್ದರು. ಆದರೆ ಹೊಟ್ಟೆಯ ಸಿಜೇರಿಯನ್ ಹೊಲಿಗೆ ಹಾಕಿದ್ದ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ಗಾಯದ ಸೋಂಕು ಹೆಚ್ಚಾದ ಕಾರಣ ಅವರು ಮಂಗಳವಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ವಾಂತಿ, ಭೇದಿಯಿಂದಲೂ ಅವರು ಬಳಲುತ್ತಿದ್ದರು.
ಹೊಟ್ಟೆ ನೋವು ಹಾಗೂ ತೀವ್ರ ಬಳಲಿಕೆಯಿಂದ ಮಂಗಳವಾರ ಸಂಜೆ ಮೃತಪಟ್ಟರು. ಅವರು 40 ದಿನದ ಮಗುವನ್ನು ಅಗಲಿದ್ದಾರೆ.
ಜಿಲ್ಲಾಸ್ಪತ್ರೆ ವೈದ್ಯರು ಸಮರ್ಪಕವಾಗಿ ಚಿಕಿತ್ಸೆ ನೀಡದ ಕಾರಣ ರೋಜಮ್ಮ ಮೃತಪಟ್ಟಿದ್ದಾರೆ ಎಂದು ರೋಜಮ್ಮ ಪತಿ ವೆಂಕಟೇಶ, ಸಹೋದರಿ ಶಾರದಮ್ಮ ಆಪಾದಿಸಿದ್ದಾರೆ.